ಉದಯವಾಹಿನಿ, ಬೆಂಗಳೂರು, ಕಳೆದ ಆರೂವರೆ ವರ್ಷಗಳಿಂದ ನಿರಂತರ ವಾಗಿ ಬಿಬಿಎಂಪಿಯಲ್ಲಿ ಒಂದಕ್ಕೆ ಎರಡು ಪಟ್ಟು ಸಂಖ್ಯೆಗಳನ್ನು ತೋರಿಸಿ ಮಾರ್ಷಲ್‍ಗಳ ಸೇವೆಯ ಹೆಸರಿನಲ್ಲಿ ಬೃಹತ್ ಲೂಟಿ ಕಾರ್ಯ ನಡೆಯುತ್ತಿದ್ದು, ಈ ಸಂಬಂಧ ಬೆಂಗಳೂರು ಉಸ್ತುವಾರಿ ಸಚಿವರು, ಆಡಳಿತಾಧಿಕಾರಿಗಳು ಮತ್ತು ಮುಖ್ಯ ಆಯುಕ್ತರಿಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ದಾಖಲೆಗಳ ಸಹಿತ ದೂರು ನೀಡಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್‍ಗಳಲ್ಲಿ ತ್ಯಾಜ್ಯ ವಿಂಗಡಣೆ ಕಾರ್ಯವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಲು ಮತ್ತು ಟಿಪ್ಪರ್ ಆಟೋಗಳ ಹಾಜರಾತಿ ಬಗ್ಗೆ ನಿಗಾವಹಿಸಲೆಂದು 2017 ರಲ್ಲಿ ಪ್ರತೀ ವಾರ್ಡ್ ಗೆ ಒಬ್ಬರಂತೆ ನಿವೃತ್ತ ಸೈನಿಕರು ಅಥವಾ ಎನ್‍ಸಿಸಿ ತರಬೇತಿ ಪೂರ್ಣ ಗೊಳಿಸಿರುವವರನ್ನು ಮಾರ್ಷಲ್‍ಗಳ ಹೆಸರಿನಲ್ಲಿ ನಿಯೋಜಿಸಿಕೊಳ್ಳುವ ಕಾರ್ಯಕ್ಕೆ ಅಂದಿನ ರಾಜ್ಯ ಸರ್ಕಾರವು ಚಾಲನೆ ನೀಡಿತ್ತು.
ಆದರೆ, ಅದಾದ ನಂತರ – ವಾರ್ಡ್ ಮಟ್ಟದ ಮಾರ್ಷಲ್‍ಗಳು, ಎಂಎಸ್‍ಜಿಪಿ ಘಟಕ, ಪಾಲಿಕೆ ಕಚೇರಿಗಳು, ವೈರ್‍ಲೆಸ್ ಅಪರೇಟರ್ಸ್, ಪ್ರಹರಿ ದಳ, ಕೆ.ಆರ್, ಮಾರ್ಕೆಟ್, ರಸೆಲ್ ಮಾರ್ಕೆಟ್, ಮಡಿವಾಳ ಮಾರ್ಕೆಟ್, ಕಲಾಸಿಪಾಳ್ಯ ಮಾರ್ಕೆಟ್ ಮತ್ತು ಭೂಭರ್ತಿ ಕೇಂದ್ರಗಳಲ್ಲಿ ಒಟ್ಟು 384 ಮಂದಿ ಮಾರ್ಷಲ್‍ಗಳು ಸೇವೆ ಸಲ್ಲಿಸುತ್ತಿದ್ದಾರೆ.
ಇದರ ಜತೆಗೆ ಇಂದಿರಾ ಕ್ಯಾಂಟೀನ್‍ಗಳು, 07 ತ್ಯಾಜ್ಯ ಸಂಸ್ಕರಣಾ ಘಟಕಗಳು, ಜಯನಗರ ವಾಣಿಜ್ಯ ಸಂಕೀರ್ಣ ಮತ್ತು ಬೆಳ್ಳಂದೂರು ಕೆರೆ, ವರ್ತೂರು ಕೆರೆಗಳಲ್ಲಿ ಒಟ್ಟು 366 ಮಂದಿ ಸೇರಿದಂತೆ ಒಟ್ಟಾರೆಯಾಗಿ 750 ಮಂದಿ ಮಾರ್ಷಲ್ ಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
