ಉದಯವಾಹಿನಿ, ಬಾಗಲಕೋಟೆ : ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಸಾಧನೆಗಾಗಿ ಅನ್ಯ ಪಕ್ಷಗಳಿಂದ ನಾಯಕರನ್ನು ಕರೆ ತರುವುದು ಸೇರಿದಂತೆ ರಾಜಕೀಯ ಧ್ರುವೀಕರಣಕ್ಕೆ ಜನವರಿ 26ರ ಬಳಿಕ ಚಾಲನೆ ನೀಡುವುದಾಗಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಬಹಳಷ್ಟು ಅಸಮಾಧಾನ ಇದೆ. ಅದು ಸ್ಪೋಟವಾಗುವುದು ಮಾತ್ರ ಬಾಕಿ ಇದೆ. ನನಗೆ ಆ ಪಕ್ಷದಲ್ಲಿ ಬಹಳಷ್ಟು ಜನ ಸ್ನೇಹಿತರಿದ್ದಾರೆ. ಅಸಮಾಧಾನ ಯಾವಾಗ ಹೊರ ಬೀಳಲಿದೆಯೋ ಗೋತ್ತಿಲ್ಲ. ಜ್ವಾಲಾಮುಖಿ ಹೊರ ಬರುವುದಂತೂ ಖಚಿತ ಎಂದರು.
ಬಿಜೆಪಿಯಿಂದ ಬಹಳಷ್ಟು ನಾಯಕರು ಕಾಂಗ್ರೆಸ್‍ಗೆ ಬರುವ ಪ್ರಕ್ರಿಯೆ ಜನವರಿ 26ರ ನಂತರ ಸಕ್ರಿಯವಾಗಲಿದೆ. ಎಷ್ಟು ಜನ ಬರುತ್ತಾರೆ ಎಂದು ಕಾದು ನೋಡಿ. ಸದ್ಯಕ್ಕೆ ಯಾವುದೇ ಮುನ್ಸೂಚನೆ ನೀಡುವುದಿಲ್ಲ. ಜ.26ರ ಬಳಿಕ ನಮ್ಮ ಚಟುವಟಿಕೆಗಳನ್ನು ಆರಂಭಿಸುತ್ತೇವೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಅಗತ್ಯವಾದ ಬ್ಲೂ ಪ್ರಿಂಟ್ ತಯಾರು ಮಾಡಿದ್ದೇವೆ ಎಂದು ಹೇಳಿದರು.
