ಉದಯವಾಹಿನಿ, ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ದಿಂದ ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಹವಾಮಾನ ಮುನ್ಸೂಚನೆ ಪ್ರಕಾರ ಆಗಾಗ್ಗೆ ಬಲವಾದ ಮೇಲ್ಮೈ ಗಾಳಿ ಬೀಸಲಿದ್ದು, ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.ನವೆಂಬರ್ 22ರಿಂದ 24ರವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಇಲ್ಲವೆ ಮಧ್ಯಮ ಪ್ರಮಾಣದ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರ ಪರಿಣಾಮ ರಾಜ್ಯದ ಮೇಲೆ ಹೆಚ್ಚಾಗುವುದಿಲ್ಲ. ಆದರೆ, ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದೆ. ಕೆಲವೆಡೆ ಸಾಧಾರಣ ಮಳೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ನೈರುತ್ಯ ಮುಂಗಾರಿನಂತೆ ಈಶಾನ್ಯ ಹಿಂಗಾರು ಮಳೆಯೂ ಕೈಕೊಟ್ಟಿದೆ. ಇತ್ತೀಚೆಗೆ ಹಿಂಗಾರು ಚೇತರಿಕೆ ಕಂಡು ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗಿತ್ತು. ಆದರೆ, ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ಚಂಡಮಾರುತದ ಪರಿಣಾಮದಿಂದ ಹಿಂಗಾರು ಕೂಡ ದುರ್ಬಲಗೊಂಡಿತ್ತು. ಹೀಗಾಗಿ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಒಣ ಹವೆ ಮುಂದುವರೆದಿದೆ.
