ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ವಿಶೇಷ ಸಾರಿಗೆ ಸೇವೆ ನೀಡುತ್ತಿರುವ ‘ನಮ್ಮ ಮಟ್ರೋ’ ಇತ್ತೀಚೆಗೆ ನಾನಾ ಕಾರಣಗಳಿಂದ ಸುದ್ದಿಯಾಗುತ್ತಿದೆ. ಮಟ್ರೋ ದಲ್ಲಿ ತಿಂಡಿ ತಿನ್ನುವುದು, ಟಿಕೆಟ್ ರಹಿತ ಪ್ರಯಾಣ, ಸಿಸಿ ಟಿವಿ ಮುಚ್ಚಿದ ಪ್ರಕರಣಗಳು ವರದಿ ಆಗಿದ್ದವು.
ಇದೀಗ ಮೊದಲ ಬಾರಿಗೆ ನಮ್ಮ ಮೆಟ್ರೋದಲ್ಲಿ ಭಿಕ್ಷೆ ಬೇಡಿದ ಘಟನೆ ನಡೆದಿದೆ. ಭಿಕ್ಷೆ ಬೇಡಿದ ಯುವಕನಿಗೆ ದಂಡ ವಿಧಿಸಲಾಗಿದೆ.ಬುಧವಾರ ಬೆಳಗ್ಗೆ ಮೆಟ್ರೋ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ಆರೋಪದ ಮೇಲೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಯುವಕನಿಗೆ ಮೊದಲ ಬಾರಿಗೆ ದಂಡ ವಿಧಿಸಿದ ಘಟನೆ ಯಶವಂತಪುರ ನಿಲ್ದಾಣದಲ್ಲಿ ನಡೆದಿದೆ.20ರ ಆಸುಪಾಸು ವಯಸ್ಸಿನ ಯುವಕ ಯಶವಂತಪುರ ನಿಲ್ದಾಣದಿಂದ ನಾಗಸಂದ್ರ ಕಡೆಗೆ ಹೊರಟಿದ್ದ ಮೆಟ್ರೋ ರೈಲಿನತ್ತ ತೆರಳಿದ್ದಾನೆ. ಈ ವೇಳೆ ಯಶವಂತಪುರ (ಹಸಿರು ಮಾರ್ಗ) ರೈಲು ನಿಲ್ದಾಣದಲ್ಲಿ ಈತ ಭಿಕ್ಷೆ ಬೇಡಿದ್ದಾನೆ. ಆಗತಾನೆ ಕರ್ತವ್ಯ ಮುಗಿಸಿ ಸಾಮಾನ್ಯ ಡ್ರೆಸ್‌ನಲ್ಲಿ ಹಿರಿಯ ಅಧಿಕಾರಿಯೊಬ್ಬರು ಯುವಕ ಭಿಕ್ಷೆ ಬೇಡುವ ವಿಚಾರವನ್ನು ನಮ್ಮ ಮೆಟ್ರೋ ಭದ್ರತಾ ಕೊಠಡಿಗೆ ತಿಳಿಸಿದ್ದಾರೆ.
ಕೂಡಲೇ ಅಧಿಕಾರಿಗಳು ನೀಡಿದ ಸೂಚನೆ ಮೇರೆಗೆ ಭದ್ರತಾ ಸಿಬ್ಬಂದಿ ಭಿಕ್ಷೆ ಬೇಡುತ್ತಿದ್ದ ಆರೋಪದ ಮೇಲೆ ಯುವಕನನ್ನು ಹಿಡಿದಿದ್ದಾರೆ. ಬಳಿಕ ಆತನಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) 500 ರೂಪಾಯಿ ದಂಡ ವಿಧಿಸಿದೆ.

Leave a Reply

Your email address will not be published. Required fields are marked *

error: Content is protected !!