ಉದಯವಾಹಿನಿ, ನವಲಗುಂದ, : ಪ್ರಸಕ್ತ ವರ್ಷದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ರೈತರು ಬಿತ್ತನೆ ಮಾಡಿದ್ದ ಬೆಳೆಗಳೆಲ್ಲ ಒಣಗಿ ನಾಶವಾಗಿ ಹೋಗಿದ್ದು ರಾಜ್ಯ ಸರ್ಕಾರ ಈ ಕೂಡಲೇ ರೈತರ ಖಾತೆಗೆ ಪ್ರತಿ ಹೆಕ್ಟರಗೆ 50 ಸಾವಿರ ರೂಪಾಯಿ ಬೆಳೆ ಹಾನಿ ಪರಿಹಾರ ಜಮಾ ಮಾಡಬೇಕೆಂದು ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಆಗ್ರಹ ಮಾಡಿದರು.
ಈ ಕುರಿತು ತಹಶೀಲ್ದಾರ ಸುದೀರ ಸಾಹುಕಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಮಾತನಾಡಿದ ಅವರು ಸರ್ಕಾರಕ್ಕೇ ರೈತಕುಲದ ಮನದಾಳದ ನೋವು ಕಾಣಿಸದಾಗಿದೆ, ಮುಂಗಾರು ಮಳೆಯಿಲ್ಲದೇ ಒಂದು ಬೆಳೆಯೂ ಬಂದಿಲ್ಲ, ಇದೆಲ್ಲದರ ಅರಿವಿದ್ದ ಸರ್ಕಾರ ಬರಗಾಲ ಅಂತಾ ಘೋಷಣೆ ಮಾಡಿ ತಿಂಗಳುಗಳೇ ಕಳೆದರು ಸಹ ಇಲ್ಲಿಯವರೆಗೆ ಒಂದು ರೂಪಾಯಿ ಪರಿಹಾರವನ್ನು ನೀಡಿಲ್ಲ, ಮಳೆ ಇಲ್ಲದೆ ಬೆಳೆ ನಷ್ಟ ಅನುಭವಿಸುತ್ತಿರುವಂತಹ ರೈತರಿಗೆ ಬೆಳೆ ನಷ್ಟದ ಪರಿಹಾರ ಹಾಕದೇ ಅನ್ನದಾತರ ಬದುಕಿನ ಜೊತೆ ಚಲ್ಲಾಟವಾಡುತ್ತಿದೆ, ಇದು ರೈತ ಕುಲದ ಕಷ್ಟದ ಸಮಯ ಈ ಸಮಯದಲ್ಲಿ ಅವರ ಖಾತೆಗೆ ಬೆಳೆ ಹಾನಿ ಪರಿಹಾರ ಹಾಕಿ ಅವರ ಜೊತೆಯಾಗಿ ನಿಲ್ಲುವಂತಹ ಕೆಲಸ ಸರ್ಕಾರ, ಮಾಡಬೇಕಾಗಿದೆ ಎಂದರು.
ರೈತ ಮುಖಂಡ ರುದ್ರಪ್ಪ ಕಟ್ಟಿ ಮಾತನಾಡಿ ಈ ವರ್ಷ ಮಳೆಯಾಗದೇ ಬೆಳೆ ಒಣಗಿ ಹೋಗಿರುವುದರಿಂದ ಕಂಗಾಲಾಗಿ ಹೋಗಿದ್ದಾರೆ, ಸರ್ಕಾರ ರೈತರ ಸದ್ಯದ ಪರಿಸ್ಥಿತಿ ಅರ್ಥ ಮಾಡಿಕೊಂಡು ಪ್ರಕೃತಿ ವಿಕೋಪದಡಿ ಪರಿಹಾರ ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸರ್ಕಾರಕ್ಕೇ ಎಚ್ಚರಿಕೆ ನೀಡಿದರು.
