ಉದಯವಾಹಿನಿ, ಧಾರವಾಡ : ಕೇವಲ ವೀರಶೈವ-ಲಿಂಗಾಯತ ಸಮಾಜಕ್ಕಷ್ಟೇ ಸೀಮಿತವಾಗಿ ಉಳಿಯದೇ, ಶ್ರೀವೀರಭದ್ರದೇವರು ವಿವಿಧ ಧರ್ಮೀಯರ ಕುಲದೇವರು ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಸೋಮವಾರ ಗೌರಿ ಹುಣ್ಣಿಮೆಯ ಸಂದರ್ಭದಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ತಮ್ಮ ಶ್ರೀಮಠದ ಆವರಣದಲ್ಲಿರುವ ಶ್ರೀವೀರಭದ್ರ ದೇವರ ವಾರ್ಷಿಕ ಗುಗ್ಗಳೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮನುಕುಲಕ್ಕೆ ಅತೀ ಅಗತ್ಯವಾಗಿರುವ ನೈತಿಕ ಮೌಲ್ಯಗಳ ಸಂವರ್ಧನೆಗಾಗಿ ಶ್ರೀವೀರಭದ್ರ ದೇವರ ಅವತಾರವಾಗಿದೆ ಎಂದರು.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು.
ಕರಡಿಮಜಲು, ನಂದಿಕೋಲು, ಪಲ್ಲಕ್ಕಿ ಸಮೇತ ಅಮ್ಮಿನಬಾವಿ ಗ್ರಾಮದ ಎಲ್ಲ ಪ್ರಮುಖ ಬೀದಿಗಳಲ್ಲಿ ಸತತ 4 ಗಂಟೆಗಳ ಕಾಲ ಗುಗ್ಗಳೋತ್ಸವ ಜರುಗಿತು. ಹಿರಿಯ ಪುರವಂತರುಗಳಾದ ಮರೇವಾಡದ ಬಸವಂತಪ್ಪ ಕಂಬಾರ, ಕರಡಿಗುಡ್ಡದ ಮಡಿವಾಳಪ್ಪ ಕುರುವಿನಕೊಪ್ಪ, ಸುಳ್ಳದ ದೇವೇಂದ್ರಪ್ಪ ಪತ್ತಾರ, ಹುಬ್ಬಳ್ಳಿಯ ಸತೀಶ ಮುಗಳಿ ಸೇರಿದಂತೆ ಹಲವು ಬಾಲ ಮತ್ತು ಯುವ ಪುರವಂತರು ಜನಪದ ಸಂಸ್ಕೃತಿಯ ವಿವಿಧ ವಡಪುಗಳನ್ನು ಹೇಳಿ ಗಮನಸೆಳೆದರು. ಎಲ್ಲ ಪುರವಂತರ ವಡಪುಗಳ ಸೇವೆಗೆ ಮುಗದ ಗ್ರಾಮದ ಶಿವಪ್ಪ ಕುಂಬಾರ, ಮರೇವಾಡದ ಶರಣು ಕಂಬಾರ ಹಾಗೂ ಅಮ್ಮಿನಬಾವಿಯ ಶಿವಾನಂದ ಸವದಿ ಅವರು ಸಂಬಾಳ ವಾದ್ಯಗಳ ಸಾಥ ನೀಡಿದರು.
ರುದ್ರಾಭಿಷೇಕ ಮಹಾಪೂಜೆ ವೈದಿಕರುಗಳಾದ ಸೋಮಲಿಂಗಶಾಸ್ತ್ರಿ ಗುಡ್ಡದಮಠ, ವಿನಾಯಕ ಹಿರೇಮಠ ಹಾಗೂ ದೇವಾಲಯದ ಅರ್ಚಕ ವೀರಯ್ಯ ಹಿರೇಮಠ ಅವರು ಸೋಮವಾರ ಪ್ರಾತಃಕಾಲದಲ್ಲಿ ಶ್ರೀವೀರಭದ್ರ ದೇವರಿಗೆ ಏಕಾದಶ ರುದ್ರಾಭಿಷೇಕ ಮಹಾಪೂಜೆ, ಪುಷ್ಪಾಲಂಕಾರ ಹಾಗೂ ಮಹಾಮಂಗಳಾರತಿ ನಡೆಸಿಕೊಟ್ಟರು. ಅಮ್ಮಿನಬಾವಿ, ಗರಗ, ಮುಮ್ಮಿಗಟ್ಟಿ, ನರೇಂದ್ರ, ಕರಡಿಗುಡ್ಡ, ಮನಗುಂಡಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಸುತ್ತಲಿನ ಬಹುಪಾಲು ಗ್ರಾಮಗಳ ಭಕ್ತಸಮೂಹ ಈ ಗುಗ್ಗಳೋತ್ಸವದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!