ಉದಯವಾಹಿನಿ, ಬೆಂಗಳೂರು: ಅತೀ ಪುರಾತನ ಇತಿಹಾಸ ಹೊಂದಿರುವ ಕನ್ನಡ ಕೇವಲ ಭಾಷೆಯಲ್ಲ, ಸಂಸ್ಕೃತಿ, ಸಂಸ್ಕಾರ, ಕಲೆ, ಧಾರ್ಮಿಕತೆ ಪರಂಪರೆ ಜೊತೆಗೆ ಜೀವನ ಪದ್ಧತಿಯೂ ಹೊಂದಿದ್ದು ಕನ್ನಡ ಸಾಹಿತ್ಯ ಸಮೃದ್ಧವಾಗಿದ್ದು ಈಚಿನ ದಿನಗಳಲ್ಲಿ ಯುವಜನತೆ ಕನ್ನಡ ಸಾಹಿತ್ಯದತ್ತ ಒಲವು ತೋರುತ್ತಿರುವುದು ಹರ್ಷದಾಯಕ ಸಂಗತಿ ಎಂದು ಖ್ಯಾತ ಹಾಸ್ಯ ಲೇಖಕ ಎಂ. ಎಸ್. ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯವರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕನ್ನಡ ಭಾಷೆಗೆ ವಿಶ್ವ ಮಾನ್ಯತೆ ಇದೆ. ತನ್ನದೆಯಾದ ಭವ್ಯ ಇತಿಹಾಸವಿದೆ. ಸಾವಿರಾರು ವರ್ಷಗಳಿಂದ ಜೀವಂತಿಕೆ ಪಡೆದುಕೊಂಡು ಬಂದಿರುವ ಹೆಮ್ಮೆಯ ಕನ್ನಡ ಭಾಷೆ, ಭಾಷೆಯಾಗಿ ಉಳಿಯದೇ ನಡೆ, ನುಡಿ, ಸಂಸ್ಕೃತಿಯಲ್ಲಿ ಅದು ಬಿಂಬಿತವಾಗಿದೆ ಎಂದರು.
ಕೆನರಾ ಬ್ಯಾಂಕ್‌ನ ವಿಭಾಗೀಯ ಮ್ಯಾನೇಜರ್ ಪ್ರಹ್ಲಾದ್ ರಾವ್ ರವರು ಮಾತನಾಡಿ, ಕೆನರಾ ಬ್ಯಾಂಕ್ ಕನ್ನಡ ಭಾಷೆಗೆ ಮೊದಲಿನಿಂದಲೂ ಹೆಚ್ಚಿನ ಪ್ರಾಶಸ್ತ್ಯ ವನ್ನು ಕೊಡುತ್ತಾ ಬರುತ್ತಿದೆ. ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳಸುವ ಜವಾಬ್ದಾರಿ ನಮ್ಮ ಕೈಲಿದೆ ಎಂದರು.
