ಉದಯವಾಹಿನಿ, ನವದೆಹಲಿ: ನವೆಂಬರ್‍ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು 1.68 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜಿಎಸ್ಟಿ ಸಂಗ್ರಹ ಶೇ.15ರಷ್ಟು ಏರಿಕೆ ಕಂಡಿದೆ. ಆದಾಗ್ಯೂ ಕಳೆದ ಅಕ್ಟೋಬರ್‍ಗೆ ಹೋಲಿಸಿದರೆ ನವೆಂಬರ್‍ನಲ್ಲಿ ಜಿಎಸ್ಟಿ ಸಂಗ್ರಹದಲ್ಲಿ ಕುಸಿತ ಕಂಡುಬಂದಿದೆ. ಅಕ್ಟೋಬರ್‌ಲ್ಲಿ 1.72 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಹಣಕಾಸು ಸಚಿವಾಲಯವು ಜಿಎಸ್ಟಿ ಸಂಗ್ರಹದ ಡೇಟಾವನ್ನು ಬಿಡುಗಡೆ ಮಾಡಿದ್ದು, 2023-24ರ ಹಣಕಾಸು ವರ್ಷದಲ್ಲಿ ಇದು ಆರನೇ ಬಾರಿಗೆ 1.60 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಜಿಎಸ್ಟಿ ಸಂಗ್ರಹವಾಗಿದೆ. ನವೆಂಬರ್‌ನಲ್ಲಿ ಸಿಜಿಎಸ್ಟಿ 30,420 ಕೋಟಿ ರೂ., ಎಸ್‍ಜಿಎಸ್ಟಿ 38,226 ಕೋಟಿ ರೂ., ಐಜಿಎಸ್ಟಿ 87,009 ಕೋಟಿ ರೂ. ಸಂಗ್ರಹವಾಗಿದ್ದು ಒಟ್ಟಾರೆ 1,67,929 ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿದೆ.
2023-24ರ ಹಣಕಾಸು ವರ್ಷದಲ್ಲಿ ಏಪ್ರಿಲ್‍ನಿಂದ ನವೆಂಬರ್ ಅವಧಿಯಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು ಶೇ.11.9ರಷ್ಟು ಏರಿಕೆಯಾಗಿ 13,32,440 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ಅವಯಲ್ಲಿ ಒಟ್ಟು ಜಿಎಸ್ಟಿ ಸಂಗ್ರಹವು 11,90,920 ಕೋಟಿ ರೂ. ಇತ್ತು.
ನಂ.2 ಸ್ಥಾನದಲ್ಲಿ ಕರ್ನಾಟಕ ದೇಶದಲ್ಲಿ ಅತಿಹೆಚ್ಚು ಜಿಎಸ್ಟಿ ಸಂಗ್ರಹದಲ್ಲಿ ಮಹಾರಾಷ್ಟ್ರಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು 2ನೇ ಸ್ಥಾನವನ್ನು ಕಾಯ್ದುಗೊಂಡಿದೆ. ಮಹಾರಾಷ್ಟ್ರದಲ್ಲಿ ಜಿಎಸ್ಟಿ ಸಂಗ್ರಹವು ಶೇ.18ರಷ್ಟು ವೃದ್ಧಿಯಾಗಿ 25,585 ಕೋಟಿ ರೂ.ಗೆ ತಲುಪಿದೆ.
ಕಳೆದ ಎಂಟು ತಿಂಗಳಲ್ಲಿ ಸರಾಸರಿ ಜಿಎಸ್ಟಿ ಸಂಗ್ರಹವು ಪ್ರತಿ ತಿಂಗಳು 1.66 ಲಕ್ಷ ಕೋಟಿ ರೂ. ಇದೆ. 2022-23ರ ಇದೇ ಅವಧಿಯಲ್ಲಿ ಸರಾಸರಿ 1.49 ಲಕ್ಷ ಕೋಟಿ ರೂ. ಇತ್ತು. ಈ ಹಣಕಾಸು ವರ್ಷದ ಏಪ್ರಿಲ್ ತಿಂಗಳಿನಲ್ಲಿ ಜಿಎಸ್ಟಿ ಸಂಗ್ರಹವು 1,87,035 ಕೋಟಿ ರೂ.ಗಳಾಗಿದ್ದು, ಇದು ಗರಿಷ್ಠ ದಾಖಲೆಯಾಗಿದೆ. ಇದರ ನಂತರ ಮೇ ಮತ್ತು ಸೆಪ್ಟೆಂಬರ್ ನಡುವೆ ಸ್ವಲ್ಪ ಇಳಿಕೆ ಕಂಡುಬಂದಿತ್ತು.

Leave a Reply

Your email address will not be published. Required fields are marked *

error: Content is protected !!