ಉದಯವಾಹಿನಿ, ಕೊಡಗು: ಹೊಳೆಯಲ್ಲಿ ತಾಯಿ ಹಾಗೂ ಇಬ್ಬರು ಯುವತಿಯರ ಶವ ಶಂಕಾಸ್ಪದವಾಗಿ ಪತ್ತೆಯಾಗಿರುವ ದಾರುಣ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಹೈಸೂಡ್ಳೂರು ಗ್ರಾಮದಲ್ಲಿ ನಡೆದಿದೆ.
ಕೂಟಿಯಾಲ ಅಶ್ವಿನಿ (೪೮), ನಿಖಿತಾ (೨೧) ಹಾಗೂ ನವ್ಯಾ (೧೮) ಮೃತಪಟ್ಟವರು.
ಕೊಡಗು ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯಲ್ಲಿ ಸೇವಾ ಪ್ರತಿನಿಧಿಯಾಗಿದ್ದ ಅಶ್ವಿನಿ ಅವರು ಇಬ್ಬರು ಪುತ್ರಿಯರೊಂದಿಗೆ ಮನೆಯಿಂದ ಹೊರಗೆ ಹೋದವರು ಶವವಾಗಿ ಪತ್ತೆಯಾಗಿದ್ದಾರೆ.
ಇವರ ಸಾವು ಆತ್ಮಹತ್ಯೆಯೋ, ಕಾಲು ಜಾರಿ ಹೊಳೆಗೆ ಬಿದ್ದಿದ್ದಾರೋ ಅಥವಾ ಕೊಲೆಗೀಡಾಗಿದ್ದಾರೋ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅಶ್ವಿನಿ ಅವರು ಇಬ್ಬರು ಮಕ್ಕಳೊಂದಿಗೆ ಹುದಿಕೇರಿಯಲ್ಲಿ ವಾಸವಿದ್ದರು. ನಿಖಿತಾ ಅವರು ಗೋಣಿಕೊಪ್ಪಲು ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದರು. ನವ್ಯಾ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ತಾಯಿ ಹಾಗೂ ಇಬ್ಬರು ಮಕ್ಕಳು ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಗೆ ಹೋಗಿದ್ದರು. ಸಂಜೆ ಮೂವರ ಶವ ಪತ್ತೆಯಾಗಿದೆ. ಅಶ್ವಿನಿ ಅವರ ಪತಿ ಮಂಡ್ಯದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀಮಂಗಲ ಪೊಲೀಸ್ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
