ಉದಯವಾಹಿನಿ, ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿ ಆತಂಕಕ್ಕೆ ಎಡೆಮಾಡಿಕೊಟ್ಟಿರುವ ಬೆಂಗಳೂರು ಸೇರಿ ಮೂರು ಜಿಲ್ಲೆಗಳಲ್ಲಿ ನಡೆದಿದ್ದ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಸಂಬಂಧ ಮತ್ತೊಬ್ಬ ಖತರ್ನಾಕ್ ನರ್ಸ್ ನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ನರ್ಸ್ ಉಷಾರಾಣಿ ಬಂಧಿತ ಆರೋಪಿಯಾಗಿದ್ದು,ಈಕೆಯ ಬಂಧನದಿಂದ ಬಂಧಿತರ ಸಂಖ್ಯೆ ೧೧ಕ್ಕೆ ಏರಿಕೆಯಾಗಿದೆ.
ಆರೋಪಿ ಉಷಾರಾಣಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಡಾ.ಚಂದನ್ ಬಲ್ಲಾಳ್‌ನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದು, ಪ್ರಕರಣ ಬೆಳಕಿಗೆ ಬಂದ ಬಳಿಕ ಉಷಾರಾಣಿ ಕೆಲಸ ಬಿಟ್ಟು ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕೆಲಸಕ್ಕೆ ಸೇರಿದ್ದಳು. ನರ್ಸ್ ಉಷಾರಾಣಿ ಪ್ರಕರಣದ ಮತ್ತೊಬ್ಬ ಆರೋಪಿ ಬ್ರೋಕರ್ ಪುಟ್ಟರಾಜು ಸಂಬಂಧಿ ಆಗಿದ್ದು ಮೂರು ದಿನಗಳ ಹಿಂದೆ ಬಂಧಿತ ನರ್ಸ್ ನೀಡಿದ್ದ ಮಾಹಿತಿಯನ್ನು ಆಧರಿಸಿ ಉಷಾರಾಣಿಯನ್ನು ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ. ಬ್ರೋಕರ್ ಪುಟ್ಟರಾಜು ಅಣತಿ ಮೇರೆಗೆ ಆರೋಪಿ ಉಷಾರಾಣಿ ಗರ್ಭಪಾತ ಮಾಡುತ್ತಿದ್ದಳು. ಗರ್ಭಪಾತಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಳು. ಬೈಯ್ಯಪ್ಪಹಳ್ಳಿ ಪೊಲೀಸರು ಬ್ರೋಕರ್ ಪುಟ್ಟರಾಜು ಅನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಎಲ್ಲ ವಿಚಾರಗಳು ಬಯಲಾಗಿವೆ. ಸದ್ಯ ಬ್ರೋಕರ್ ಪುಟ್ಟರಾಜು ಜಾಮೀನು ಪಡೆದಿದ್ದು, ಸಂಬಂಧಿ ಉಷಾರಾಣಿಯನ್ನು ಬಂಧಿಸಿ ವಿಚಾರಣೆ ಕೈಗೊಳ್ಳಲಾಗಿದೆ. ಇನ್ನು ಉಷಾರಾಣಿ ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆ ಲಿಂಗ ಪತ್ತೆ ಮಾಡದೇ ಆರೋಗ್ಯ ಇಲಾಖೆ ನಿಯಮಾವಳಿ ಪ್ರಕಾರ ಗರ್ಭಪಾತ ಮಾಡುತಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಆಸ್ಪತ್ರೆ ಮಾಲೀಕರನ್ನು ಬೈಯಪ್ಪನಹಳ್ಳಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!