ಉದಯವಾಹಿನಿ, ಹಾಸನ : ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟಿದೆ. ಅರ್ಜುನನ ಹಠಾತ್ ಅಗಲಿಕೆಗೆ ಅರ್ಜುನ ಆನೆ ಕಾಳಜಿ ವಹಿಸಿದ್ದ ಮಾವುತ ವಿನುವಿನ ರೋಧನ ಮುಗಿಲು ಮುಟ್ಟಿದೆ.ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ವಿಶೇಷ ಬಾಂಧವ್ಯವನ್ನು ಬಿಂಬಿಸುವ ಈ ಹೃದಯವಿದ್ರಾವಕ ಘಟನೆಗೆ ನೆರೆದಿದ್ದ ಸಾವಿರಾರು ಜನರು ಕಣ್ಣೀರು ಸುರಿಸಿದ್ದಾರೆ.ಹಾಸನ ಜಿಲ್ಲೆಯ ಸಕಲೇಶಪುರ ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಆನೆ ಮೃತಪಟ್ಟಿದೆ.
ಇಂದು ಅರ್ಜುನ ಆನೆಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಹಲವು ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಜನರು ಅರ್ಜುನ ಆನೆಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಮೈಸೂರು ದಸರಾದಲ್ಲಿ ಅರ್ಜುನನ ಆನೆ ೮ ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತಿದೆ. ೨೨ ವರ್ಷಗಳಿಂದ ಅರ್ಜುನ ಆನೆ ಮೈಸೂರು ದಸರಾಕ್ಕೆ ಹೆಜ್ಜೆ ಹಾಕಿತ್ತು. ಅರ್ಜುನ ಆನೆ ಅಂತಿಮ ದರ್ಶನಕ್ಕೆ ಬಂದ ಮಾವುತ ವಿನುವಿನ ಅರ್ಜುನನ ಬದುಕಿಸಿ,ಇಲ್ಲದಿದ್ದರೆ ಆನೆಯೊಂದಿಗೆ ನನ್ನನ್ನು ಮಣ್ಣು ಮಾಡಿ ಆನೆಯನ್ನು ತಬ್ಬಿ ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾನೆ.ಆನೆ ಅರ್ಜುನಿಗೆ ಅಂತಿಮ ವಿದಾಯ ಹೇಳಲು ಬಂದಾಗ ಈ ಘಟನೆ ನಡೆದಿದೆ.ರಾಜನಂತೆ ಇದ್ದ ಅರ್ಜುನನ ಕಳೆದುಕೊಂಡ ನೋವು ಎಲ್ಲರ ಮನದಲ್ಲೂ ಶಾಶ್ವತವಾಗಿ ಉಳಿಯುತ್ತದೆ.
