ಉದಯವಾಹಿನಿ, ಬೆಂಗಳೂರು: ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ೫ ಕೋಟಿ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ಉಗ್ರ ಹಿಂದುತ್ವದ ಭಾಷಣಕಾರ್ತಿ ಚೈತ್ರಾ ಕೋರ್ಟ್ ಜಾಮೀನು ನೀಡಿದ್ದು ಆಕೆ ಇಂದು ನಗರದ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಚೈತ್ರಾ ಜತೆ ಸಹ ಆರೋಪಿ ಶ್ರೀಕಾಂತ್ ಕೂಡಾ ಬಿಡುಗಡೆಯಾಗಿದ್ದಾನೆ.ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಸೆಪ್ಟೆಂಬರ್ ೧೨ರ ರಾತ್ರಿ ಚೈತ್ರಾಳನ್ನು ಉಡುಪಿಯಲ್ಲಿ ಬಂಧಿಸಲಾಗಿತ್ತು.
ಅದೇ ಸಂದರ್ಭದಲ್ಲಿ ಆಕೆಯ ಸಹಚರ ಗಗನ್ ಕಡೂರ್, ಪ್ರಜ್ವಲ್, ಶ್ರೀಕಾಂತ್ ಕೂಡಾ ಸೆರೆಯಾಗಿದ್ದರು. ಮುಂದೆ ಕಡೂರಿನ ರಮೇಶ್ ಮತ್ತು ಧನರಾಜ್ ಹಾಗೂ ಚೆನ್ನಾ ನಾಯ್ಕ್ ಸೆರೆಸಿಕ್ಕಿದ್ದರು. ಅದಾದ ಕೆಲವೇ ದಿನದಲ್ಲಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಕಟಕ್‌ನಲ್ಲಿ ಬಂಧಿಸಲಾಗಿತ್ತು. ಹಾಲಶ್ರೀ ಸ್ವಾಮೀಜಿಗೆ ನವೆಂಬರ್ ೧೧ರಂದು ಕೋರ್ಟ್ ಜಾಮೀನು ನೀಡಿತ್ತು. ಇದೀಗ ಪ್ರಕರಣದ ಮೊದಲ ಆರೋಪಿ ಚೈತ್ರಾ ಮತ್ತು ಏಳನೇ ಆರೋಪಿ ಶ್ರೀಕಾಂತ್‌ಗೆ ೩ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
