ಉದಯವಾಹಿನಿ, ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ದೇವಾಲಯದ ಲಾಡು ತಯಾರಿಕಾ ಕೇಂದ್ರದಲ್ಲಿ ಡಿ.1ರಂದು ಸಂಭವಿಸಿದ ಅಗ್ನಿ ಆಕಸ್ಮಿಕಕ್ಕೆ ಸಂಬಂಧಿಸಿದಂತೆ, ಆ ದಿನ ಕೇಂದ್ರದ ಮೇಲುಸ್ತುವಾರಿಗೆ ನಿಯೋಜಿಸಲಾಗಿದ್ದ ದ್ವಿತೀಯ ದರ್ಜೆ ಸಹಾಯಕ ಪಿ.ಮಹದೇವಸ್ವಾಮಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಆದೇಶ ಹೊರಡಿಸಿದ್ದಾರೆ.
ಕರ್ತವ್ಯದಲ್ಲಿದ್ದ 27 ನೌಕರರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. 24 ಗಂಟೆಯೊಳಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ನೀಡದಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ₹10.20 ಲಕ್ಷ ನಷ್ಟ: ಬೆಂಕಿ ಅವಘಡದಿಂದ 36,200 ಲಾಡುಗಳು, 28 ಟಿನ್ ಅಡುಗೆ ಎಣ್ಣೆ (₹62,570), 450 ಕೆಜಿ ಸಕ್ಕರೆ (₹22 ಸಾವಿರ), 96 ಕೆಜಿ ಕಡಲೆ ಹಿಟ್ಟು (₹6.570), 40 ಕೆಜಿ ನಂದಿನಿ ತುಪ್ಪ (₹17,500), 30 ಕೆಜಿ ಒಣ ದ್ರಾಕ್ಷಿ (₹5,800), 20 ಕೆಜಿ ಗೋಡಂಬಿ (₹14,100), ಇನ್ನಿತರ ವಸ್ತುಗಳು ಸೇರಿದಂತೆ ಒಟ್ಟು ₹10.20 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಸಿಲುಕಿ ಹಾಳಾಗಿದೆ.
