ಉದಯವಾಹಿನಿ, ಬೆಳಗಾವಿ: ಐದು ವರ್ಷಗಳಿಂದ ನಿಮ್ಮದೇ ಸರ್ಕಾರವೇ ಇತ್ತು. ಕೇಂದ್ರ ಸರ್ಕಾರದಲ್ಲಿಯೂ ಒಂದು ಕೋಟಿ ಖಾಲಿ ಹುದ್ದೆ ಇದೆ. ಆಗ ನೀವು ಕತ್ತೆ ಕಾಯುತ್ತಿದ್ದೀರಾ ಎಂದು ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರತಿಪಕ್ಷ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ವಿಧಾನ ಪರಿಷತ್ತಿನಲ್ಲಿಂದು ಸರ್ಕಾರಿ ನೌಕರರಿಗೆ ೭ನೆ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಉತ್ತರ ಕೊಡಿಸಬೇಕೆಂದು ಆಗ್ರಹಿಸಿ ಸದನದ ಬಾವಿಗಿಳಿದು ಪ್ರತಿಪಕ್ಷಗಳ ಸದಸ್ಯರು ಧರಣಿ ನಡೆಸುತ್ತಿದ್ದ ವೇಳೆ ಅವರು ಪ್ರಸ್ತಾಪಿಸಿದರು.
ರಾಜ್ಯ ಸರ್ಕಾರ ನೀಡಿದ ಎಲ್ಲಾ ಭರವಸೆ ಈಡೇರಿಸಲು ಬದ್ಧವಾಗಿದೆ. ಆದರೆ, ಕಳೆದ ಐದು ವರ್ಷಗಳಿಂದ ಅವರದ್ದೇ ಸರ್ಕಾರ ಇತ್ತು.ಆದ ವೇತನ ವಿಚಾರ ನೆನಪಿಗೆ ಬಂದಿಲ್ಲವೇ ಆಗ ನೀವು ಕತ್ತೆ ಕಾಯುತ್ತಿದ್ದರಾ? ಇನ್ನೂ, ಕೇಂದ್ರ ಸರ್ಕಾರದಲ್ಲಿ ಒಂದು ಕೋಟಿ ಹುದ್ದೆ ಖಾಲಿ ಇದೆ ಅದನ್ನು ಮೊದಲು ತುಂಬಿಸಿ ಮಾತನಾಡಿ ಎಂದರು. ಇದಕ್ಕೆ ಉತ್ತರಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ, ಕತ್ತೆ ಕಾಯುತ್ತಿದ್ದಾರಾ ಎಂದರೆ ಏನರ್ಥ ಈ ರೀತಿಯ ಮಾತುಗಳು ಒಳ್ಳೆಯದಲ್ಲ ಎಂದು ಹೇಳಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಜೆಡಿಎಸ್ ಸದಸ್ಯ ಬೋಜೇಗೌಡ, ಕತ್ತೆಯಂತ ಪ್ರಾಣಿ ಇನ್ನೊಂದಿಲ್ಲ. ಅತಿ ಪ್ರಾಮಾಣಿಕ, ದುಡಿಯುವ ಜೀವಿ ಅದು ನುಡಿದರು.
