ಉದಯವಾಹಿನಿ, ಬೆಳಗಾವಿ: ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ ಗಜರಾಜ ವೀರ ಅರ್ಜುನ ನೆನಪಿನಲ್ಲಿ ಸರ್ಕಾರ ಸ್ಮಾರಕವೊಂದನ್ನು ನಿರ್ಮಾಣ ಮಾಡುವುದಾಗಿ ಪ್ರಕಟಿಸಿದೆ. ವಿಧಾನ ಪರಿಷತ್ತಿನ ಎರಡನೇ ದಿನ ಕಲಾಪ ಆರಂಭದಲ್ಲಿ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಹಾಗೂ ವೀರ ಯೋಧರು ಮತ್ತು ಐತಿಹಾಸಿಕ ಮೈಸೂರು ದಸರಾ ವೈಭವದ ಕೇಂದ್ರ ಬಿಂದುವಾಗಿದ್ದ ಗಜರಾಜ ಅರ್ಜುನ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚಿಸಲಾಯಿತು.
ಈ ವೇಳೆ ಸಭಾ ನಾಯಕ ಎನ್.ಎಸ್.ಭೋಸರಾಜು ಪ್ರಸ್ತಾಪಿಸಿ, ಬಲಶಾಲಿ ಮಾಸ್ಟರ್ ಹಾಗೂ ಹಿರಿಯ ಎಂಬ ಹೆಸರುಗಳಿಂದ ಖ್ಯಾತನಾಗಿದ್ದ ಅರ್ಜುನನನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು, 22ವರ್ಷಗಳಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿತ್ತು.

2012ರಿಂದ 2019ರವರೆಗೆ 8 ಬಾರಿ ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ತನ್ನ ರಾಜಗಾಂಭೀರ್ಯದ ನಡಿಗೆಯ ಮೂಲಕ ದಸರೆಯ ಮೆರುಗಿಗೆ ಕೇಂದ್ರ ಬಿಂದುವಾಗಿ ನಾಡಿನ ಜನತೆಯ ಪ್ರೀತಿಗೆ ಪಾತ್ರವಾಗಿತ್ತು.ಇದರ ನೆನಪು ಸದಾ ಉಳಿಸುವ ನಿಟ್ಟಿನಲ್ಲಿ ಸ್ಮಾರಕವೊಂದು ನಿರ್ಮಿಸಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!