ಉದಯವಾಹಿನಿ, ಹಾಸನ: ಕಾಡಾನೆ ಸೆರೆ ವೇಳೆ ಕ್ಯಾಪ್ಟನ್ ಅರ್ಜುನ ದುರಂತ ಸಾವು ಕಂಡ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯು ಇಂದಿನಿಂದ ಸ್ಥಗಿತಗೊಳಿಸಿದೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಐದು ಸಾಕಾನೆಗಳನ್ನು ಕ್ಯಾಂಪ್‌ಗಳಿಗೆ ಕಳುಹಿಸಲಾಗಿದೆ.ಅರ್ಜುನನ ನಾಯಕತ್ವದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಪ್ರಶಾಂತ, ಭೀಮ, ಸುಗ್ರೀವ, ಅಶ್ವತ್ಥಾಮ ಹಾಗೂ ಧನಂಜಯ ಆನೆಗಳು ವಾಪಸ್ ಕ್ಯಾಂಪ್‌ಗೆ ಬೆಳಿಗ್ಗೆ ೧೦ ವಾಪಸ್ ತೆರಳಲಿವೆ. ಅರ್ಜುನನ ನೇತೃತ್ವದಲ್ಲಿ ಕಳೆದ ನ.೨೪ ರಿಂದ ೯ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ, ಆರು ಸಲಗಗಳ ಸೆರೆ ಮತ್ತು ಸ್ಥಳಾಂತರ ಕಾರ್ಯಾಚರಣೆ ಆರಂಭವಾಗಿತ್ತು.
ಇದುವರೆಗೂ ಮೂರು ರೇಡಿಯೋ ಕಾಲರ್ ಅಳವಡಿಸಿದ್ದು, ಮೂರು ಸಲಗಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ.
ಕಾಡಾನೆ ಜೊತೆಗಿನ ಕಾಳಗದಲ್ಲಿ ದುರಂತ ಸಾವಿಗೀಡಾದ ಅರ್ಜುನನನ್ನು ನಿನ್ನೆ ವಿಧಿ-ವಿಧಾನ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಸಕಲೇಶಪುರದ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಅರ್ಜುನನ ಸಾವಿನ ಬಗ್ಗೆ ಸ್ವತಃ ಮಾವುತನೇ ಅನುಮಾನ ವ್ಯಕ್ತಪಡಿಸಿದ್ದಾನೆ. ಅರ್ಜುನನ ದೇಹಕ್ಕೆ ಗುಂಡೇಟು ತಗುಲಿದೆ ಎಂಬ ಅನುಮಾನ ಇದ್ದರೂ ಸಹ ವಿಸ್ತೃತ ಮರಣೋತ್ತರ ಪರೀಕ್ಷೆ ನಡೆದಿಲ್ಲ. ಕೇವಲ ಬಾಹ್ಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕನಿಷ್ಠ ಅರ್ಜುನನ ಮೃತದೇಹದ ಮತ್ತೊಂದು ಭಾಗವನ್ನು ನೋಡದೇ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಅಧಿಕಾರಿಗಳ ನಡೆಯ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!