ಉದಯವಾಹಿನಿ, ಬೆಂಗಳೂರು: ಕಾನೂನು ಬಾಹಿರವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳ ಮೇಲೆ ನಿಗಾವಹಿಸಿರುವ ಬಿಬಿಎಂಪಿ, ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದು, ವಾಣಿಜ್ಯ ಸಂಕೀರ್ಣಗಳು, ಐಷರಾಮಿ ಕಟ್ಟಡಗಳ ಪಟ್ಟಿ ಸಿದ್ಧಪಡಿಸಿದೆ. ನಗರದಲ್ಲಿ ಕಾನೂನು ಬಾಹಿರವಾಗಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆ, ವಾಣಿಜ್ಯ ಮಳಿಗೆಗಳು ಕೈಗಾರಿಕೆಗಳು ಸೇರಿದಂತೆ ಬೆಲೆ ಬಾಳುವ ಐಷರಾಮಿ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಮಾಲೀಕರಿಗೆ ಒಂದು ಸುತ್ತಿನ ನೋಟಿಸ್ ನೀಡಿರುವ ಬಿಬಿಎಂಪಿ, ಸ್ವಯಂ ಪ್ರೇರಿತ ತೆರವುಗೊಳಿಸಿ, ಇಲ್ಲಾ ನಾವೇ ಜೆಸಿಬಿ ಕಾರ್ಯಾಚರಣೆ ನಡೆಸುತ್ತೇವೆ ಎಂದು ಸೂಚಿಸಿದೆ.
ಕಳೆದ ಕೆಲ ತಿಂಗಳ ಹಿಂದೆ ನಗರದಲ್ಲಿ ಜೆಸಿಬಿ ಘರ್ಜನೆ ಸದ್ದು ಮಾಡಿತ್ತು. ಮಳೆಯ ಪರಿಣಾಮ ಮುಳುಗಡೆಯಾದ ಪ್ರದೇಶಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಮಾಡಲಾಗಿತ್ತು. ಬಳಿಕ ಬಿಬಿಎಂಪಿ ಒತ್ತುವರಿ ಕಾರ್ಯ ಅಷ್ಟಕ್ಕೇ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಎಚ್ಚೆತ್ತುಕೊಂಡ ಬಿಬಿಎಂಪಿ ಇದೀಗ ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಂಡವರ ಮನೆಗಳಿಗೆ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಜೆಸಿಬಿ ನುಗ್ಗಿಸಲು ಮುಂದಾಗಿದೆ.
ಈಗಾಗಲೇ ಮಹದೇವಪುರ ವಲಯ ಹಾಗೂ ಬೊಮ್ಮನಹಳ್ಳಿ ವಲಯ ಒತ್ತುವರಿ ತೆರವಿಗೆ ಪಾಲಿಕೆ ಮುಂದಾಗಿದ್ದು, ಈಗಾಗಲೇ ರೈನ್‌ಬೊ ಡ್ರೈವ್ ಲೇಔಟ್ ೧೩ ವಿಲ್ಲಾಗಳಿಗೆ ನೋಟಿಸ್ ನೀಡಲಾಗಿದೆ. ಇಂತಹ ಒತ್ತುವರಿ ವಿಲ್ಲಾಗಳಿಂದಲೇ ಅಪಾರ್ಟ್‌ಮೆಂಟ್‌ಗಳಿಗೆ ಪ್ರತಿ ಬಾರಿಯೂ ಕೂಡ ನೀರು ನುಗ್ಗಿ ಸಮಸ್ಯೆ ಆಗುತ್ತಿದೆ. ಹೀಗಾಗಿ ಒತ್ತುವರಿ ಮಾಡಿರುವವರಿಗೆ ನೋಟಿಸ್ ನೀಡಲು ಮುಂದಾಗಿದೆ ಎಂದು ಪಾಲಿಕೆ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.ಎಲ್ಲಿ ಎಷ್ಟು ಪ್ರಕರಣ: ಒಟ್ಟಾರೆ ೩,೧೭೬ರಷ್ಟು ರಾಜಕಾಲುವೆ ಒತ್ತುವರಿ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೊಂದೆಡೆ ೨,೩೨೨ರಷ್ಟು ತೆರವು ಆಗಿದೆ. ಬಾಕಿ ಪ್ರಕರಣ ಸಹ ೮೫೪ರಷ್ಟಿದ್ದರೆ, ನ್ಯಾಯಾಲಯದಲ್ಲಿ ೧೫೫ರಷ್ಟು ಪ್ರಕರಣಗಳಿವೆ. ಇನ್ನೂ, ಒತ್ತುವರಿ ತೆರವಿಗೆ ಆದೇಶ ಹೊರಡಿಸುವ ಹಂತದಲ್ಲಿರುವ ಪ್ರಕರಣಗಳು ೪೮೭ ಇದ್ದರೆ, ತಹಶೀಲ್ದಾರರಿಂದ ಒತ್ತುವರಿ ತೆರವಿಗೆ ನೋಟಿಸ್ ನೀಡಿದ ಪ್ರಕರಣಗಳು ಸಹ ೧೬೨ರಷ್ಟಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

 

Leave a Reply

Your email address will not be published. Required fields are marked *

error: Content is protected !!