ಉದಯವಾಹಿನಿ, ಹಳೇಬೀಡು: ಜಾನುವಾರುಗಳಿಗೆ ರಸಮೇವು ತಯಾರಿಸಲು ಮುಸುಕಿನ ಜೋಳದ ದಂಟಿಗೆ ಹಳೇಬೀಡು ಭಾಗದಲ್ಲಿ ಬೇಡಿಕೆ ಹೆಚ್ಚಾಗಿದ್ದು, ಜೋಳದ ಮಾತೆ ಕಟಾವಿಗೆ ಮೊದಲೆ ದಂಟು ಮಾರಾಟ ಆಗುತ್ತಿರುವುದು ಬೆಳೆಗಾರರಿಗೆ ವರದಾನವಾಗಿದೆ.
ಜೋಳದ ಬೆಳೆ ಪರಿಪೂರ್ಣವಾಗಲು ನಾಲ್ಕೂವರೆಯಿಂದ 5 ತಿಂಗಳು ಬೇಕಾಗುತ್ತದೆ. ದಂಟು ಕೊಂಡುಕೊಳ್ಳಲು ರಸಮೇವು ತಯಾರಕರು ಮುಂದೆ ಬರುತ್ತಿರುವುದರಿಂದ 3 ರಿಂದ ಮೂರುವರೆ ತಿಂಗಳಿಗೆ ಜೋಳದ ಹೊಲ ಖಾಲಿಯಾಗುತ್ತಿದೆ. ಜೋಳದ ದಂಟು ಮಾರಾಟದಿಂದ ವರ್ಷಕ್ಕೆ ಹೆಚ್ಚುವರಿ ಒಂದು ಬೆಳೆ ತೆಗೆಯಲು ರೈತರಿಗೆ ಅವಕಾಶ ದೊರಕುತ್ತಿದೆ.
ಜೋಳ ಬಿತ್ತನೆ ಮಾಡಿ ಮೊಳಕೆ ಒಡೆದು, ಗಿಡ ಬೆಳೆಯಲಾರಂಭಿಸಿದ ನಂತರ ಒಂದು ಹರತೆ ಬೇಸಾಯ ಮಾಡಿ, ಒಂದೆರೆಡು ಬಾರಿ ಕಳೆ ತೆಗೆಯಬೇಕು. ಗೊಬ್ಬರ ಹಾಕಿ ಸಮರ್ಪಕವಾಗಿ ನೀರು ಕೊಟ್ಟರೆ, ದಂಟು ಆರೋಗ್ಯಕರವಾಗಿ ಬೆಳೆಯುತ್ತದೆ. ಇಂತಹ ದಂಟನ್ನು ಪುಡಿ ಮಾಡಿ ರಸ ಮೇವಾಗಿ ಜಾನುವಾರುಗಳಿಗೆ ಕೊಡಲು ಅನುಕೂಲವಾಗುತ್ತದೆ ಎಂದು ರೈತರು ಹೇಳುತ್ತಾರೆ.
ಜಾನುವಾರು ಸಾಕಿದ ಕೆಲವು ರೈತರು ಜೋಳದ ದಂಟು ಹುಡಿ ಮಾಡುವ ಯಂತ್ರ ಹೊಂದಿದ್ದಾರೆ. ದಂಟಿನ ಹುಡಿಯ ರಸ ಮೇವನ್ನು ಚೀಲದಲ್ಲಿ ತುಂಬಿಸಿಟ್ಟುಕೊಳ್ಳುತ್ತಾರೆ. ದೀರ್ಘಕಾಲದವರೆಗೆ ಜಾನುವಾರುಗಳಿಗೆ ಮೇವು ಕೊಡುತ್ತಾರೆ. ದೊಡ್ಡ ಯಂತ್ರದಲ್ಲಿ ಸೆಬ್ಬೆಯನ್ನು ಹುಡಿ ಮಾಡಿ ಸಂಗ್ರಹಿಸಿ ಕೆಲ ರೈತರು ಮಾರಾಟ ಮಾಡುತ್ತಾರೆ ಎಂದು ರಸ ಮೇವು ತಯಾರಿಕಾ ಪ್ರಕ್ರಿಯೆಯನ್ನು ರೈತರು ಬಿಚ್ಚಿಡುತ್ತಾರೆ.
