ಉದಯವಾಹಿನಿ, ಆಲೂರು: ಸಾರಿಗೆ ಸಂಸ್ಥೆಯ ಬಸ್‌ಗಳು ತಾಲ್ಲೂಕು ಕೇಂದ್ರವಾಗಿರುವ ಆಲೂರು ಕಡೆಗಣಿಸುತ್ತಿದ್ದು, ಪ್ರಯಾಣಿಕರ ಜೊತೆ ಚೆಲ್ಲಾಟ ಆಡಲಾಗುತ್ತಿದೆ. ಪ್ರಯಾಣಿಕರ ಗೋಳು ಆಲಿಸುವವರು ಯಾರು ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ.
ಹಾಸನ ಮತ್ತು ಸಕಲೇಶಪುರ ಕಡೆಯಿಂದ ಸಂಚರಿಸುವ ‘ಸುವಿಹಾರಿ’, ‘ರಾಜಹಂಸ’ ಹೊರತುಪಡಿಸಿ ಉಳಿದ ಎಲ್ಲ ಎಕ್ಸ್‌ಪ್ರೆಸ್ ಬಸ್‌ಗಳು ಕಡ್ಡಾಯವಾಗಿ ಆಲೂರು ತಾಲ್ಲೂಕು ಕೇಂದ್ರದ ಮೂಲಕ ಹಾದು ಹೋಗಬೇಕು.
ಈ ಸಂದರ್ಭದಲ್ಲಿ ಸ್ಥಳೀಯ ಬಸ್ ನಿಲ್ದಾಣದಲ್ಲಿ ಹಾಜರಿರುವ ಸಂಚಾರ ನಿಯಂತ್ರಕ ಕಚೇರಿಯಲ್ಲಿ ದಾಖಲಾಗಬೇಕು ಎಂಬ ನಿಯಮವಿದೆ.
ಆದರೆ ಕೆಲವು ಡಿಪೋಗಳಿಗೆ ಸೇರಿದ ಸಾರಿಗೆ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ರಾತ್ರಿ ವೇಳೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆಲೂರಿನ ಟಿಕೆಟ್ ನೀಡುತ್ತಾರೆ. ಆದರೆ ಬಸ್‌ಗಳು ಆಲೂರಿಗೆ ಬರದೇ ರಾಷ್ಟ್ರೀಯ ಹೆದ್ದಾರಿಯ ಆಲೂರು ಬೈಪಾಸ್ ನೇರಲಕೆರೆ ಕೂಡಿಗೆ ಮತ್ತು ಭೈರಾಪುರದ ಬಳಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದಾರೆ. ಪ್ರಯಾಣಿಕರು ಸುಮಾರು 2 ಕಿ.ಮೀ. ದೂರ ನಡೆದು ಬರಬೇಕಾಗಿದೆ. ಈ ಪರಿಸ್ಥಿತಿಯಲ್ಲಿ ಕಾಡು ಪ್ರಾಣಿಗಳಿಂದ ಜೀವಭಯದಲ್ಲೇ ಹೆಜ್ಜೆ ಇಡುವಂತಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಚಾಲಕ, ನಿರ್ವಾಹಕರು ಉಡಾಫೆಯಿಂತ ವರ್ತಿಸುತ್ತಾರೆ. ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ.
