ಉದಯವಾಹಿನಿ, ಬೆಂಗಳೂರು: ಇದೇ ಶನಿವಾರ, ಡಿಸೆಂಬರ್ ೨೩ ರಂದು ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ನಲ್ಲಿ ವಿಶ್ವ ರೈತರ ದಿನಾಚರಣೆಗೆ ಹಾಗೂ ಬೃಹತ್ ರೈತರಿಗಾಗಿ ಓಟ, ಫಾರ್ಮ್- ಥಾನ್ ಆಯೋಜಿಸಲಾಗಿದೆ.
ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ವಿಶ್ವ ರೈತರ ದಿನಾಚರಣೆಯಲ್ಲಿ ದೇಶದ ಪ್ರಮುಖ ಕೃಷಿ ತಜ್ಞರು, ಪ್ರಗತಿಪರ ರೈತರು, ವಿವಿಧ ರಾಜ್ಯಗಳ ರೈತರು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ವಿಧ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಕಳೆದ ಎಂಟು ವರ್ಷಗಳಿಂದ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ’ಇಷ್ಟಾ’ ಸಂಸ್ಥೆ, ಆರ್ಟ್ ಆಫ್ ಲಿವಿಂಗ್ ಮತ್ತು ಶ್ರೀ ಶ್ರೀ ನೈಸರ್ಗಿಕ್ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟ ದ ರೈತರ ದಿನಾಚರಣೆ ಮತ್ತು ಫಾರ್ಮ್-ಥಾನ್ ನಡೆಯಲಿದೆ.
ಆರ್ಟ್ ಆಫ್ ಲಿವಿಂಗ್ ಆಶ್ರಮದ ಆವರಣದಲ್ಲಿ ಬೆಳಿಗ್ಗೆ ’ರೈತರಿಗಾಗಿ ಓಟ’ ಆಯೋಜಿಸಲಾಗಿದೆ.
ಬಳಿಕ ಆಶ್ರಮದ ಅನುಗ್ರಹ ಮಂಟಪದಲ್ಲಿ ವಿಚಾರ ಗೋಷ್ಠಿಗಳು, ಚರ್ಚೆ ಹಾಗೂ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.
’ಇಷ್ಟಾ’ ಸಂಸ್ಥೆ ಅಧ್ಯಕ್ಷ ಅಚ್ಯುತ ರಾವ್, ಶ್ರೀ ಶ್ರೀ ನೈಸರ್ಗಿಕ್ ನ ಅಧ್ಯಕ್ಷ ರಂಗನಾಥ್ ಪ್ರಸಾದ್, ಸಾವಯವ ಕೃಷಿ ತಜ್ಞ ರವೀಂದ್ರ ದೇಸಾಯಿ, ಕಾರ್ಯಕ್ರಮದ ಪಾಲುದಾರ ಸಂಸ್ಥೆ ಎಸ್ ವಿ ಆರ್ ಸಮೂಹ ಸಂಸ್ಥೆಯ ಪ್ರಸಾದ್ ರೆಡ್ಡಿ, ಸಂಚಾಲಕ ಸ್ಟಾಲಿನ್, ಹಿರಿಯ ಪತ್ರಕರ್ತ ಹನುಮೇಶ್ ಕೆ. ಯಾವಗಲ್, ಸಂಚಾಲಕಿ ತನುಶ್ರೀ ಸೇರಿದಂತೆ ಹಲವು ಪ್ರಮುಖರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

 

Leave a Reply

Your email address will not be published. Required fields are marked *

error: Content is protected !!