ಉದಯವಾಹಿನಿ, ಬೆಂಗಳೂರು: ಹುಬ್ಬಳ್ಳಿಯ ಶ್ರೀಕಾಂತ್ ಪೂಜಾರಿ ವಿರುದ್ಧ 16 ಕ್ರಿಮಿನಲ್ ಮೊಕದ್ದಮೆಗಳಿವೆ. ಹುಬ್ಬಳ್ಳಿಯಲ್ಲಿ 26 ಪ್ರಕರಣಗಳಲ್ಲಿ 36 ಆರೋಪಿ ಗಳಿದ್ದು, ಅವರಲ್ಲಿ ಇರುವ ಬೇರೆ ಹಿಂದೂಗಳ ಬಗ್ಗೆ ಬಿಜೆಪಿಯವರು ಏಕೆ ಮಾತನಾಡುತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಬಿಜೆಪಿಯವರು ಧಮ್ಮು, ತಾಕತ್ತು ಎಂದೆಲ್ಲ ಹೇಳಿಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯದ ಜನ ಯಾರಿಗೆ ಧಮ್ಮು , ತಾಕತ್ತು ಇದೆ ಎಂಬುದನ್ನು ತೋರಿಸಿದ್ದಾರೆ. ಸರ್ಕಾರಕ್ಕೆ ತಾಕತ್ತು ಇದೆಯೋ ಇಲ್ಲವೋ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ಪರವಾಗಿ ಬಿಜೆಪಿಯವರು ವಕಾಲತ್ತು ವಹಿಸಿ ಹೋರಾಟ ನಡೆಸುತ್ತಿರುವುದನ್ನು ನೋಡಿದರೆ ಅವರಿಗೆ ಏನಾಗಿದೆ ಎಂಬುದೇ ಅರ್ಥವಾಗುತ್ತಿಲ್ಲ. ಶ್ರೀಕಾಂತ್ ಪೂಜಾರಿ ಕರಸೇವಕನಲ್ಲ. ಆತನ ವಿರುದ್ಧ 16 ಕ್ರಿಮಿನಲ್ ಕೇಸ್‍ಗಳಿವೆ ಎಂದರು. ಈಗ ಪ್ರತಿಭಟನೆ ಮಾಡುವ ಬಿಜೆಪಿಯವರು ಹಿಂದೆ ಐದು ವರ್ಷ ಮತ್ತು ಇತ್ತೀಚೆಗೆ 4 ವರ್ಷ ಆಡಳಿತ ನಡೆಸಿದ್ದರು. ಒಂದು ವೇಳೆ ಶ್ರೀಕಾಂತ್ ಬಿಜೆಪಿ ಆರೋಪಿಯಾಗಿದ್ದಾಗಲೇ ಅವರ ಸರ್ಕಾರ ಇದ್ದಾಗಲೇ ಪ್ರಕರಣವನ್ನು ಇತ್ಯರ್ಥ ಮಾಡಬಹುದಿತ್ತು ಅಥವಾ ಖುಲಾಸೆಗೊಳಿಸ ಬಹುದಾಗಿತ್ತು, ಏಕೆ ಮಾಡಲಿಲ್ಲ. ಈಗ ಯಾರು, ಯಾರನ್ನು ದೂಷಣೆ ಮಾಡಬೇಕು ಎಂದು ಪ್ರಶ್ನಿಸಿದರು.
31 ವರ್ಷಗಳ ಹಳೆಯ ಪ್ರಕರಣ ಎಂಬುದು ನಿಜ. ಆದರೆ ಅವುಗಳನ್ನು ಎಷ್ಟು ವರ್ಷ ನನೆಗುದಿಯಲ್ಲಿಡಬೇಕು. ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿ ಎಂದು ಸೂಚನೆ ನೀಡಿದಾಗ, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ಶ್ರೀಕಾಂತ್ ಪೂಜಾರಿ ಪ್ರಕರಣವು ಮುನ್ನೆಲೆಗೆ ಬಂದಿದೆ. ಇದೊಂದೇ ಅಲ್ಲ 26 ಪ್ರಕರಣಗಳಲ್ಲಿ 36 ಮಂದಿ ಆರೋಪಿಗಳಿದ್ದಾರೆ. ಅವರಲ್ಲಿಯೂ ಹಿಂದೂಗಳಿದ್ದಾರೆ. ಅವರ ಬಗ್ಗೆ ಬಿಜೆಪಿಯವರು ಏಕೆ ಮಾತನಾಡುವುದಿಲ್ಲ ಎಂದರು. ಚುನಾವಣೆಯಲ್ಲಿ ರಾಜಕೀಯ ಮಾಡಬೇಕು, ಕಾನೂನು ಸುವ್ಯವಸ್ಥೆಯಂತಹ ವಿಚಾರದಲ್ಲೂ ರಾಜಕೀಯ ಮಾಡುವುದು ಒಳ್ಳೆಯದಲ್ಲ. ಜನ ಈಗಾಗಲೇ ಪಾಠ ಕಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಪಾಠ ಕಲಿಸುತ್ತಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!