ಉದಯವಾಹಿನಿ ಚಿಂತಾಮಣಿ: ಜೀತದಾಳುಗಳಿಗೆ ಬಿಡುಗಡೆ ಪತ್ರ ನೀಡಿ, ಪುನರ್ವಸತಿ ಕಲ್ಪಿಸಬೇಕು. ಭೂಮಿ ಅನುಷ್ಠಾನ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಜೀವಿಕ ಸಂಘಟನೆ ನೇತೃತ್ವದಲ್ಲಿ ಗುರುವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. 2022ರಲ್ಲಿ ಜಾರಿಯಾದ ಜೀತ ಕಾನೂನು ತಕ್ಷಣ ವಾಪಸ್ ಪಡೆದು, ಹೊಸ ಕ್ರಿಯಾ ಯೋಜನೆ ರೂಪಿಸಬೇಕು. ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಜೀತದಾಳುಗಳಿಗೆ ಒಂದು ತಿಂಗಳ ಒಳಗೆ ಪರಿಶೀಲನೆ ನಡೆಸಿ ಬಿಡುಗಡೆ ಪತ್ರ ನೀಡಬೇಕು. 2013ನೇ ಸಾಲಿನಲ್ಲಿ ಬಿಡುಗಡೆ ಪತ್ರ ಪಡೆದ 273 ಜೀತದಾಳುಗಳಿಗೆ ಬಾಕಿ ಇರುವ ಜೀತ ಪರಿಹಾರ ಮತ್ತು ಕಾನೂನು ಪ್ರಕಾರ ಲಭ್ಯವಾಗಬೇಕಿರುವ ಇತರ ಸೌಲಭ್ಯಗಳು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಬಿಡುಗಡೆ ಪತ್ರ ಸಿಕ್ಕಿರುವ ಪ್ರತಿ ಜೀತದಾಳುಗಳಿಗೂ, ಅಂತ್ಯೋದಯ ಪಡಿತರ ಚೀಟಿ, ಸರ್ಕಾರಿ ಉದ್ಯೋಗ ಸೇರಿದಂತೆ ಹಲವು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಜೀತದಾಳುಗಳು ಜೀವಿಕ ಸಂಘಟನೆ ನೇತೃತ್ವದಲ್ಲಿ ನಗರದ ಪ್ರವಾಸಿ ಮಂದಿರದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿತು. ಜೀವಿಕ ರಾಜ್ಯ ಘಟಕದ ಅಧ್ಯಕ್ಷ ಡಾ. ವಿ.ಗೋಪಾಲ್, ಡಾ.ರತ್ನಮ್ಮ, ಜೀವಿಕ ಜಿಲ್ಲಾ ಸಂಚಾಲಕ ರವಿಚಂದ್ರನಾಥ್, ತಾಲ್ಲೂಕು ಸಂಚಾಲಕ ಚಂದ್ರಪ್ಪ, ಶಿಲ್ಪ, ಶಂಕರ್, ರವೀಂದ್ರ, ವೆಂಕಟರವಣಪ್ಪ, ಈಶ್ವರಮ್ಮ, ಗರಿಗಹನುಮಂತಯ್ಯ ಹಾಗೂ ಜೀತದಾಳುಗಳು ಇದ್ದರು.