ಉದಯವಾಹಿನಿ, ಬೆಂಗಳೂರು: ಲೋಕಸಭೆ ಚುನಾವಣೆ ತಯಾರಿ, ನಿಗಮ ಮಂಡಳಿ ನೇಮಕಾತಿ, ಭಾರತ್ ನ್ಯಾಯ ಯಾತ್ರೆ ಸೇರಿದಂತೆ ರಾಜ ಕೀಯದ ನಾನಾ ರೀತಿಯ ವಿದ್ಯಮಾನಗಳ ಕುರಿತು ಇಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್‍ನ ಮಹ ತ್ವದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭಾಗವಹಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವಾರು ಮಹತ್ವದ ವಿಚಾರಗಳು ಚರ್ಚೆಯಾಗಿವೆ. ಇದರಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಇಂಡಿಯಾ ರಾಜಕೀಯ ಕೂಟದ ಇತರ ಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಮಹತ್ವದ ಸಭೆ ನಡೆಸಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲೂ ವೀಕ್ಷಕರಾಗಿದ್ದ ಆಯಾ ಸಚಿವರು ಸಭೆ ನಡೆಸಿ ಅಭಿಪ್ರಾಯ ಕ್ರೂಢೀಕರಿಸಿ ಮುಚ್ಚಿದ ಲಕೋಟೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವರದಿ ಸಲ್ಲಿಸಿದ್ದಾರೆ. ಆ ವರದಿಯೊಂದಿಗೆ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಸಚಿವರು ನೀಡಿರುವ ಸಂಭವನೀಯ ಪಟ್ಟಿಯಲ್ಲಿ ಪ್ರತಿ ಕ್ಷೇತ್ರಕ್ಕೂ ತಲಾ ಮೂರು ಮಂದಿ ಆಕಾಂಕ್ಷಿಗಳ ಹೆಸರುಗಳಿವೆ. ಕೆಲವು ಕ್ಷೇತ್ರಗಳಿಗೆ ಒಂದೇ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಅದನ್ನು ರಾಜ್ಯ ನಾಯಕರು ಹೈಕಮಾಂಡ್‍ಗೆ ಸಲ್ಲಿಸಲಿದ್ದಾರೆ.
ಈ ಸಂಭವನೀಯ ಪಟ್ಟಿ ಆಧರಿಸಿ ಹೈಕಮಾಂಡ್ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಲಿದೆ. ರಾಜ್ಯ ಕಾಂಗ್ರೆಸ್ ವತಿಯಿಂದಲೂ 2-3 ಸಮಾಲೋಚನಾ ಸಭೆ ನಡೆಯುವ ನಿರೀಕ್ಷೆಗಳಿವೆ. ರಾಜ್ಯದಲ್ಲಿ ಕನಿಷ್ಟ 22 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ರಾಜ್ಯ ನಾಯಕರು ಅದಕ್ಕೆ ಪೂರ್ವ ತಯಾರಿಗಳನ್ನು ಕೈಗೊಳ್ಳುತ್ತಿದ್ದಾರೆ.
