ಉದಯವಾಹಿನಿ, ಬೆಂಗಳೂರು: ಕ್ರಿಮಿನಲ್ ಹಿನ್ನೆಲೆ ಇರುವ ವ್ಯಕ್ತಿ ರಾಮಭಕ್ತನ ಸೋಗು ಹಾಕಿಕೊಂಡರೆ ಕಾನೂನು ಕ್ರಮ ಕೈಗೊಳ್ಳಬಾರದಾ ಎಂದು ಪ್ರಶ್ನಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಕ್ರಿಮಿನಲ್ ವ್ಯಕ್ತಿಯ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಸಂಸ್ಕಾರ ಇಲ್ಲವೇ ಎಂದು ಪ್ರಶ್ನಿಸಿದಾರೆ. ಹಳೆಯ ಪ್ರಕರಣವೊಂದರಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿರುವ ಶ್ರೀಕಾಂತ್ ಪೂಜಾರಿ ಶ್ರೀ ರಾಮನಂತೆ ಆದರ್ಶ ಪುರುಷನೂ ಅಲ್ಲ, ಶ್ರೀ ಕೃಷ್ಣನಂತೆ ಅವತಾರ ಪುರುಷನೂ ಅಲ್ಲ.

ಆತ ವೃತ್ತಿಪರ ಕ್ರಿಮಿನಲ್ ಅಷ್ಟೆ. ಶ್ರೀಕಾಂತ್ ಪೂಜಾರಿ ವಿರುದ್ಧ 1992 ರಿಂದ 2014 ರವರೆಗೆ ಹುಬ್ಬಳ್ಳಿಯ ವಿವಿಧ ಠಾಣೆಗಳಲ್ಲಿ ಸುಮಾರು 16 ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಇಂತಹ ಕ್ರಿಮಿನಲ್ ಹಿನ್ನೆಲೆಯಿರುವ ವ್ಯಕ್ತಿ ರಾಮಭಕ್ತ ಎಂಬ ಸೋಗು ಹಾಕಿಕೊಂಡರೆ ಕಾನೂನು ಕ್ರಮ ತೆಗೆದುಕೊಳ್ಳಬಾರದೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಯ ಬೆಂಬಲಕ್ಕೆ ನಿಂತಿರುವ ರಾಜ್ಯ ಬಿಜೆಪಿ ನಾಯಕರಿಗೆ ಮಾನ,ಮರ್ಯಾದೆ ಮತ್ತು ಸಂಸ್ಕಾರವೇ ಇಲ್ಲದಂತಾಗಿದೆ. ದೀರ್ಘಾವಧಿಯಿಂದ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣಾ ಪ್ರಮಾಣಪತ್ರವನ್ನು ನ್ಯಾಯಾಲಯ ಕೇಳಿದೆ. ಪೊಲೀಸರು ಇತ್ಯರ್ಥವಾಗದ ಹಳೆಯ ಪ್ರಕರಣ ಸಂಬಂಧ ಶ್ರೀಕಾಂತ್ ಪೂಜಾರಿ ಹೆಸರಿದ್ದುದರಿಂದ ಬಂಧಿಸಿದ್ದಾರೆ. ನ್ಯಾಯಾಲಯದ ಸೂಚನೆಯ ಅನುಸಾರ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಕ್ರಿಮಿನಲ್ ಪರ ಪ್ರತಿಭಟನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!