ಉದಯವಾಹಿನಿ, ತುಮಕೂರು: ಹಿಂದುತ್ವ ದುರುಪಯೋಗಪಡಿಸಿಕೊಂಡು ಬಿಜೆಪಿ ಹಿಂದೂಗಳಿಗೆ ಅಪಮಾನ ಮಾಡುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಬಂಧಿತ ಕರಸೇವಕನ ವಿರುದ್ಧ ಮಟ್ಕಾ, ದೊಂಬಿ, ನಕಲಿ ಮದ್ಯಮಾರಾಟ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಆತನ ವಿರುದ್ಧ ಹಲವಾರು ವರ್ಷಗಳಿಂದಲೂ ಕಾಲಕಾಲಕ್ಕೆ ಪ್ರಕರಣಗಳು ದಾಖಲಾಗಿವೆ. ಸುದೀರ್ಘ ಕಾಲದಿಂದ ನೆನೆಗುದಿಯಲ್ಲಿದ್ದ ಪ್ರಕರಣವನ್ನು ಇತ್ಯರ್ಥಪಡಿಸುವ ಸಲುವಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಇಂತಹ ಆರೋಪಿ ರಕ್ಷಣೆ ಮಾಡಲು ಹಿಂದುತ್ವವವನ್ನು ಬಳಕೆ ಮಾಡುತ್ತಿರುವುದು ಶೋಭೆಯಲ್ಲ ಎಂದರು. ಬಿಜೆಪಿಯವರು ಕ್ಷುಲ್ಲಕ ವಿಚಾರವನ್ನು ರಾಷ್ಟ್ರದ ಸಮಸ್ಯೆ ಎಂಬಂತೆ ಚರ್ಚೆ ಮಾಡುತ್ತಿದ್ದಾರೆ. ತಪ್ಪು ಮಾಡಿದವರನ್ನ ಶಿಕ್ಷಿಸಲು ಅಡ್ಡಿಪಡಿಸುವ ಮೂಲಕ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹಿಂದುತ್ವ ಮತ್ತು ಶ್ರೀರಾಮನನ್ನ ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿಲ್ಲ. ಪದೆಪದೆ ರಾಜ್ಯಸರ್ಕಾರವನ್ನು ಹಿಂದುತ್ವದ ವಿರೋಧಿ ಎಂದು ಬಿಂಬಿಸುವುದು ಖಂಡನೀಯ. ರಾಜಕಾರಣಕ್ಕಾಗಿ ಹಿಂದುತ್ವವನ್ನು ಬಳಸಿಕೊಂಡು ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದಾರೆ. ಹಿಂದುತ್ವದ ದುರುಪಯೋಗವನ್ನು ಕಂಡು ಬೇಸರಗೊಂಡೇ ಅಂಬೇಡ್ಕರ್‍ರವರು ಬೌದ್ಧಧರ್ಮಕ್ಕೆ ಮತಾಂತರಗೊಂಡರು ಎಂದರು.
ಯಾವುದೋ ಒಂದು ಧರ್ಮದಿಂದ ದೇಶ ಕಟ್ಟಲು ಸಾಧ್ಯವಿಲ್ಲ. ಎಲ್ಲರ ಸಹಕಾರವೂ ಅಗತ್ಯ. ರಾಕೆಟ್ ತಂತ್ರಜ್ಞಾನ, ಟಿಪ್ಪು ಸುಲ್ತಾನರಿಂದ ಆರಂಭಗೊಂಡು ಇಂದು ಅಭಿವೃದ್ಧಿಗೊಂಡಿದೆ. ಅಬ್ದುಲ್ ಕಲಾಂರ ಕೊಡುಗೆಯನ್ನು ಮರೆಯಲು ಸಾಧ್ಯವೇ ಎಂದರು.
