ಉದಯವಾಹಿನಿ, ಕಲಬುರಗಿ: ಪ್ರಧಾನ ಹಬ್ಬದ ಹಿಂದಿನ ದಿನ ಹಬ್ಬಕ್ಕೆ ತಯಾರಿ ಮಾಡುಕೊಳ್ಳುವದನ್ನು ಹಬ್ಬದಂತೆ ಶ್ರದ್ಧೆಯಿಂದ ಆಚರಿಸುವ ಪದ್ಧತಿ ನಮ್ಮಲಿದೆ. ದೀಪಾವಳಿ ಹಬ್ಬಕ್ಕೆ ಮುನ್ನಾದಿನ ನೀರು ತುಂಬುವ ಹಬ್ಬ.ನಾಳಿನ ಎಳ್ಳ ಅಮಾವಾಸ್ಯೆ ಮುನ್ನಾದಿನವಾದ ಕಾಯಿಪಲ್ಲೆ ಸೋಸುವ ಹಬ್ಬ. ಉತ್ತರ ಕರ್ನಾಟಕದ ರೈತರ ಬಹು ದೊಡ್ಡಹಬ್ಬ ಹಾಗೂ ಹೊಸ ವರ್ಷದ ಮೊದಲ ಹಬ್ಬವಾದ ಎಳ್ಳ ಅಮವಾಸೆ. ಇದರ ಹಿಂದಿನ ದಿನ ಅಂದರೆ ಇಂದು ಕಾಯಿ ಪಲ್ಲೆ ಬಿಡಿಸುವದು ಅಥವಾ ಕಾಯಿಪಲ್ಲೆ ಸೋಸುವ ಹಬ್ಬ ಎಂದೇ ಕರೆಯುವರು. ಮಾಘ ಮಾಸದಲಿ ಹೇರಳವಾಗಿ ಸಿಗುವ ಕಾಯಿಪಲ್ಲೆ ಮಿರಿ ಮಿರಿ ಮಿಂಚುವ ಮೆಂತೆ , ಪುಂಡಿ ಪಲ್ಲೆ ,ಅಚ್ಚ ಹಸಿರಿನಂತೆ ಕಾಣುವ ಪಾಲಕ, ಸಬ್ಬಸಗಿ, ಉಳ್ಳಾಗಡ್ಡಿ , ಗಜ್ಜರಿ, ಎಳೆ ಮೆಣಸಿನಕಾಯಿ, ಎಣ್ಗಾಯಿಗೆ ಸಣ್ಣ ಬದನೆಕಾಯಿ ಕಾಯಿ ಆರಿಸುವದು, ಹಸಿಖಾರಕ್ಕೆ ಬಲಿತ ಮೆಣಸಿನಕಾಯಿ ಬೇರೆ ಮಾಡುವದು, ಎಣ್ಣಿಯೊಳಗೆ ಉಪ್ಪು ಹಚ್ಚಿ ಹುರಿಯಲು ಎಳಿ ಮೆಣಸಿನಕಾಯಿ ಬೇರೆ ಮಾಡುವದು, ಎಳೆ ಹುಣಸೆಕಾಯಿ ಬಿಡಿಸಿ ಇಡುವದು, ಕಾಳುಗಳನ್ನು ನೆನೆಸಿಡುವದು. ಇದಕ್ಕೆಲ್ಲ ಹಬ್ಬದ ದಿನ ಸಮಯವಿರದಿರುವುದರಿಂದ ಹಿಂದಿನ ದಿನವೇ ಎಲ್ಲ ತಯಾರಿ ಮಾಡಿಡುವರು.
