
ಉದಯವಾಹಿನಿ, ಕೋಲಾರ: ಸಮಾಜದಲ್ಲಿ ಸರಕಾರಗಳಿಗೆ ಹೆಚ್ಚು ತೆರಿಗೆ ಕಟ್ಟುವ ಸಮುದಾಯವು ಅರ್ಯವೈಶ್ಯವಾಗಿದೆ, ಸಮುದಾಯದವರು ಸರಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಪಡೆಯುವಂತಾಗಬೇಕು ಎಂದು ಆರ್ಯವೈಶ್ಯ ಮಂಡಳಿ ಜಿಲ್ಲಾ ಅಧ್ಯಕ್ಷ ಎನ್.ಸಿ ಸತೀಶ್ ಕರೆ ನೀಡಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ವಾಸವಿ ಮಹಿಳಾ ಮಂಡಳಿಯ ೩೨ನೇ ವರ್ಷದ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿ, ಆರ್ಯವೈಶ್ಯ ಸಮುದಾಯದ ಬಂಧುಗಳು ಕೇವಲ ಧಾರ್ಮಿಕತೆಗೆ ಮಾತ್ರ ಸೀಮಿತವಾಗದೇ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಇದರ ಜೊತೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರವನ್ನು ಸಹ ವಾಸವಿ ಮಹಾಮಂಡಳಿ ವತಿಯಿಂದ ಆಯೋಜಿಸಲಾಗುತ್ತದೆ ಸದುಪಯೋಗ ಪಡಿಸಿಕೊಳ್ಳಿ ಎಂದರು.
ವಾಸವಿ ಮಹಿಳಾ ಮಂಡಳಿಯ ಪ್ರಾರಂಭವಾಗಿ ೩೨ ವರ್ಷಗಳಾಗಿದ್ದು ಈ ಸಂದರ್ಭದಲ್ಲಿ ವಾರ್ಷಿಕೋತ್ಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅದೇ ರೀತಿಯಲ್ಲಿ ಯುವ ಸಮುದಾಯವನ್ನು ಸಹ ಇಂತಹ ವೇದಿಕೆಗೆ ಕರೆತರುವ ನಿಟ್ಟಿನಲ್ಲಿ ವಾಸವಿ ಯುವ ಮಹಿಳಾ ಮಂಡಳಿಯನ್ನು ಪ್ರಾರಂಭಿಸಿ ಅವರಿಗೂ ಕೂಡ ಸಮಾಜದ ಆಚಾರ ವಿಚಾರಗಳ ಜೊತೆಗೆ ಧಾರ್ಮಿಕತೆಯ ಸಂಸ್ಕೃತಿಯನ್ನು ಪರಿಚರಿಸುವಂತಾಗಬೇಕು ಈ ಸಂಸ್ಥೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂಬ ಉದ್ದೇಶದಿಂದ ವಯಸ್ಸಿನ ಅಂತರವನ್ನು ತೆಗೆದುಹಾಕಲಾಗಿದೆ ಎಲ್ಲರೂ ಮುಂಚೂಣಿಯಲ್ಲಿ ಇದ್ದು ಸಮುದಾಯದ ಅಭಿವೃದ್ಧಿಗೆ ಶ್ರಮಿಸುವಂತಾಗ ಬೇಕೆಂದರು.
