ಉದಯವಾಹಿನಿ, ಬೆಂಗಳೂರು: ಆಸ್ತಿತೆರಿಗೆ ಹೆಸರಲ್ಲಿ ಬೆಂಗಳೂರು ಜನರ ಕಿಸೆಗೆ ಕತ್ತರಿ ಹಾಕಲು ಹೊರಟಿರುವ ಈ ಜೇಬುಗಳ್ಳ ಸರಕಾರದ ನಡೆಯನ್ನು ವಿಧಾನಪರಿಷತ್ ಹಿರಿಯ ಸದಸ್ಯ, ಜೆಡಿಎಸ್ ನಾಯಕ ಟಿ. ಎ.ಶರವಣ ಬಲವಾಗಿ ಖಂಡಿಸಿದ್ದಾರೆ.
೨೦೧೬- ೧೭ ಸಾಲಿನಿಂದ ಪರಿಷ್ಕರಣೆ ತೆರಿಗೆ ಹಣ ಪಾವತಿಸುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ನೋಟಿಸ್ ನೀಡುತ್ತಿರುವುದು ಹಗಲು ದರೋಡೆ, ಸುಲಿಗೆ ಎನ್ನಲೇಬೇಕು ಎಂದು ಅವರು ಖಂಡಿಸಿದ್ದಾರೆ. ಒಮ್ಮೆಲೆ ಏಳು ವರ್ಷಗಳ ಆಸ್ತಿ ತೆರಿಗೆ ಪರಿಷ್ಕರಿಸುವ ಕ್ರಮ ಅವೈಜ್ಞಾನಿಕವಾಗಿದೆ. ಇದು ಜನರ ಬದುಕಿನ ಮೇಲೆ ಬರೆ ಎಳೆಯುವ ದಂಡನೆ ಆಗಿದೆ ಎಂದು ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಮತ್ತೊಂದು ವಿಶೇಷ ಎಂದರೆ ಬೆಂಗಳೂರು ಉಸ್ತುವಾರಿ ವಹಿಸಿರುವ ಡಿಸಿಎಂ ಶಿವಕುಮಾರ್ ಮತ್ತು ಬೆಂಗಳೂರಿಂದ ಸತತವಾಗಿ ಆಯ್ಕೆ ಆಗುತ್ತಿರುವ ಸಚಿವ ರಾಮಲಿಂಗಾರೆಡ್ಡಿ ಅವರ ನಡುವೆ ಹೊಂದಾಣಿಕೆಯೇ ಇಲ್ಲದೆ ಇರುವುದು.
ಬಿಬಿಎಂಪಿ ಯ ಈ ಕ್ರಮವನ್ನು ಖುದ್ದು ರಾಮಲಿಂಗಾರೆಡ್ಡಿ ಅವರೇ ಖಂಡಿಸಿ, ಇಂಥ ನೊಟೀಸ್ ನೀಡುವುದನ್ನು ನಿಲ್ಲಿಸಬೇಕು ಎಂದು ಪತ್ರ ಬರೆದು ಹೇಳಿದ್ದಾರೆ.
ಅಂದರೆ ಈ ವಿಚಾರದಲ್ಲಿ ಸರಕಾರದಲ್ಲಿಯೇ ಸಹಮತ ಇಲ್ಲ ಎನ್ನುವುದು ವ್ಯಕ್ತವಾಗುತ್ತದೆ. ಈ ಸಮನ್ವಯತೆಯ ಕೊರತೆಯನ್ನು ಸರಕಾರ ಮೊದಲು ಸರಿಮಾಡಿಕೊಳ್ಳಲಿ ಎಂದವರು ಆಗ್ರಹಪಡಿಸಿದರು.
ಜನಸಾಮಾನ್ಯರ ಸಂಕಷ್ಟ ತಪ್ಪಿಸಲು ತಕ್ಷಣ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಿ ಈ ನೊಟೀಸ್ ನೀಡುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಿ. ಬೆಂಗಳೂರು ಉಸ್ತುವಾರಿ ಡಿಸಿಎಂ ಶಿವಕುಮಾರ್ ಅವರಿಗೆ ಬುದ್ಧಿವಾದ ಹೇಳಲಿ ಎಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!