ಉದಯವಾಹಿನಿ, ಕೆಜಿಎಫ್: ‘ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ₹7.44 ಕೋಟಿ ವೆಚ್ಚದಲ್ಲಿ 62 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಮುಂದಿನ ಮೂರು ತಿಂಗಳಲ್ಲಿ ಸ್ಥಾಪನೆ ಮಾಡಲಾಗುವುದು’ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಪಂಚಾಯಿತಿ ಬಾರ್ಲಿ ಗ್ರಾಮದಲ್ಲಿ ಶನಿವಾರ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ಮಾತನಾಡಿ, ‘ಒಂದು ಊರಿನಲ್ಲಿ ಸಹ ಕುಡಿಯುವ ನೀರಿನ ಸಮಸ್ಯೆ ಇರಬಾರದು.
ಪ್ರತಿ ಘಟಕಕ್ಕೆ ₹12ಲಕ್ಷ ರೂಪಾಯಿ ವೆಚ್ಚದಲ್ಲಿ ಘಟಕ ಸ್ಥಾಪನೆ ಮಾಡಲಾಗುವುದು. ಪ್ರತಿ ಪಂಚಾಯಿತಿಯಲ್ಲಿ ಕನಿಷ್ಠ ಐದು ಗ್ರಾಮಗಳಲ್ಲಿ ಘಟಕ ಸ್ಥಾಪನೆ ಮಾಡಲಾಗುವುದು. ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಉಳಿದ ನಾಲ್ಕು ಗ್ರಾಮಗಳಲ್ಲಿ ಘಟಕ ಪ್ರಾರಂಭವಾಗಲಿದೆ ಎಂದರು.
ಘಟಕ ಸ್ಥಾಪನೆ ಬಗ್ಗೆ ಸ್ಪಷ್ಟ ಮತ್ತು ವ್ಯವಸ್ಥಿತವಾದ ಯೋಜನೆ ಇಟ್ಟುಕೊಳ್ಳಲಾಗಿದೆ. ಚುನಾವಣೆ ಸಂದರ್ಭದಲ್ಲಿ ನನ್ನ ಕೈ ಹಿಡಿದರೆ ಏನಾದರೂ ಸಮಸ್ಯೆ ಬಗೆಹರಿಸಿಯೇ ಕಾಲಿಡುತ್ತೇನೆ ಎಂದು ಹೇಳಿದ್ದರು. ಅದೇ ರೀತಿಯಲ್ಲಿ ಈಗ ಕುಡಿಯುವ ನೀರಿನ ಘಟಕ ಸ್ಥಾಪನೆ ಯಾದ ನಂತರ ಮೊದಲ ಬಾರಿಗೆ ಬರುತ್ತಿದ್ದೇನೆ’ ಎಂದರು.
ಒಂದು ಊರಿನ ಸಮಸ್ಯೆ ಬಗೆಹರಿಸಿದರೆ ಸಾಲದು. ಇಡೀ ಕ್ಷೇತ್ರದ ಸಮಸ್ಯೆ ನಿವಾರಣೆಯಾಗಬೇಕು. ತಾಲ್ಲೂಕಿನಲ್ಲಿ ಕಳೆದ ಹದಿನೈದು ವರ್ಷಗಳಿಂದ ಉದ್ಯೋಗ ಅವಕಾಶ ಸಿಗುತ್ತಿಲ್ಲ ಎಂಬ ಕೊರಗು ಕಾಣುತ್ತಿದೆ. ಐದು ವರ್ಷಗಳ ಪರಿಶ್ರಮದಿಂದಾಗಿ ಬೆಮಲ್‌ನಲ್ಲಿ ಅನುಪಯುಕ್ತವಾಗಿದ್ದ ಜಾಗವನ್ನು ವಾಪಸ್ ಪಡೆಯಲಾಗಿದೆ. ಬೆಮಲ್‌ಗೆ ನೀಡಿದ್ದ ಜಾಗವನ್ನು ಬೆಮಲ್ ಸರಿಯಾಗಿ ಉಪಯೋಗ ಮಾಡಿಕೊಳ್ಳಲಿಲ್ಲ. ಸುಮಾರು ಐವತ್ತು ಅರವತ್ತು ವರ್ಷಗಳ ಕಾಲ ಅದನ್ನು ಹಾಗೆಯೇ ಬೀಡುಬಿಟ್ಟಿತ್ತು. ಉದ್ಯೋಗ ಕೂಡ ಸೃಷ್ಟಿ ಮಾಡಲಿಲ್ಲ. ಆ ಜಾಗವನ್ನು ಗುರ್ತಿಸಿ ಎಂದರು.
