ಉದಯವಾಹಿನಿ, ಹೊಸಕೋಟೆ: ‘ಹಳ್ಳೀಕಾರ್ ತಳಿ’ ಎಂತಲೇ ಈ ಭಾಗದಲ್ಲಿ ಹೆಸರು ಮಾಡಿರುವ ದೇಸಿ ಹಸುಗಳು ತಾಲ್ಲೂಕಿನಲ್ಲಿ ಕಡಿಮೆಯಾಗುತ್ತಿವೆ. ಭಾರತೀಯ ಸಂಸ್ಕೃತಿಯಲ್ಲಿ ಕಾಮದೇನು ಎಂತಲೇ ಹೆಸರು ಪಡೆದಿರುವ ನಾಟಿ ಹಸುಗಳ ಸಾಕಣಿಕೆ ಅವಸಾನದ ಅಂಚಿಗೆ ತಲುಪಿದ್ದು, ಗ್ರಾಮದ ಪ್ರತಿ ಮನೆಯಲ್ಲೂ ಸಾಮಾನ್ಯವಾಗಿ ಇರುತ್ತಿದ್ದ ನಾಟಿ ಹಸುಗಳನ್ನು ಇಂದು ವಸ್ತುಪ್ರದರ್ಶನದಲ್ಲಿ ಕಾಣಬೇಕಾದ ಪರಿಸ್ಥಿತಿ ಬಂದಿದೆ. ತಾಲ್ಲೂಕಿನಲ್ಲಿ 2019ರ ಪಶು ಗಣತಿಯ ಪ್ರಕಾರ ತಾಲ್ಲೂಕಿನಲ್ಲಿ ಒಟ್ಟ 829 ನಾಟಿ ಹಸುಗಳಿದ್ದವು. ಅದು ಪ್ರಸ್ತುತ ಸಂದರ್ಭದಲ್ಲಿ 500ಕ್ಕೆ ಇಳಿದಿದೆ.ನಾಗರೀಕತೆ ಹೆಚ್ಚಾದಂತೆ ವಿಭಕ್ತ ಕುಟುಂಬಗಳು ಒಡೆದು, ಜಮೀನು ವಿಭಜನೆಯಾಗಿ ವ್ಯವಸಾಯದಿಂದ ದೂರ ಉಳಿದ ರೈತರು ಸಣ್ಣಪುಟ್ಟ ಕೆಲಸಗಳಿಗೆ ನಗರವನ್ನು ಅವಲಂಬಿಸಿ ಕೃಷಿಯಿಂದ ಸಂಪೂರ್ಣವಾಗಿ ವಿಮುಖರಾಗುತ್ತಿದ್ದಾರೆ. ಇದರಿಂದ ನಾಟಿ ಹಸುಗಳ ಸಂಖ್ಯೆ ಇಳಿಮುಖವಾಗಿದೆ. ಕೃಷಿಗಾಗಿ ಅತಿಯಾದ ಯಂತ್ರೋಪಕರಣಗಳ ಅವಲಂಬನೆ, ಹಣ ಸಂಪಾದನೆಗೆ ಸೀಮೆ ಹಸುಗಳ ಮೇಲೆ ಅತಿಯಾದ ಪ್ರೀತಿ. ಈ ಕಾರಣಗಳಿಂದ ನಾಟಿ ಹಸು ಸಾಕಲು ರೈತರು ಹಿಂಜರಿಯುತ್ತಿದ್ದಾರೆ.ಹೊಸಕೋಟೆ ತಾಲ್ಲೂಕಿನಲ್ಲಿ ಸ್ಥಳೀಯ ದೇಶಿ ಹಸುಗಳು ಮಾತ್ರವಲ್ಲ, ಮಿಶ್ರ ತಳಿ ಮತ್ತು ಎಮ್ಮೆಗಳ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಿದೆ. 2019ರ ಗಣತಿಯ ಪ್ರಕಾರ 28,117 ಇದ್ದ ಸೀಮೆ ಹಸುಗಳ ಸಂಖ್ಯೆ ಪಸ್ತುತ 25,000 ಸಾವಿರಕ್ಕೆ ಇಳಿದಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು. 5,325 ಎಮ್ಮೆಗಳ ಸಂಖ್ಯೆಯೂ ಗಣನೀಯವಾಗಿ ಇಳಿಮುಖವಾಗಿದೆ.

Leave a Reply

Your email address will not be published. Required fields are marked *

error: Content is protected !!