
ಉದಯವಾಹಿನಿ, ಬೆಂಗಳೂರು: ಟೀ ಕುಡಿಯಲು ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ಸಂಚಾರಿ ಠಾಣೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರು- ಬಳ್ಳಾರಿ ಮುಖ್ಯರಸ್ತೆಯ ಸಣ್ಣ ಅಮ್ಮಾನಿಕೆರೆ ಬಳಿ ರಾತ್ರಿ ನಡೆದಿದೆ. ಕಟ್ಟಡ ನಿರ್ಮಾಣ ಕಾರ್ಮಿಕ ನಾಗೇಶ್ (20) ಮೃತ ದುರ್ದೈವಿ.
ಇವರು ಮೂಲತಃ ಮಹಾರಾಷ್ಟ್ರದ ನಾಂದೇಡ್ ತಾಲ್ಲೂಕಿನವರು. ಪ್ರಸ್ತುತ ಅವರು ಉಪ್ಪಾರಹಳ್ಳಿ ಗ್ರಾಮದ ಥೀಮ್ ಅಂಬಿಯೆನ್ಸ್ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್‍ನ ನಿರ್ಮಾಣ ಕಟ್ಟಡ ಬಳಿ ವಾಸವಾಗಿದ್ದರು. ಕಳೆದ ರಾತ್ರಿ 9.15ರ ಸಂದರ್ಭದಲ್ಲಿ ಇಬ್ಬರು ಸ್ನೇಹಿತರೊಂದಿಗೆ ಕಂಪನಿ ಪಕ್ಕದಲ್ಲಿರುವ ಅಂಗಡಿಗೆ ನಾಗೇಶ್ ಟೀ ಕುಡಿಯಲು ಹೋಗುತ್ತಿದ್ದನು. ಸಣ್ಣ ಅಮ್ಮಾನಿಕೆರೆ ರಸ್ತೆಯ ಬದಿಯಲ್ಲಿ ಹೋಗುವಾಗ ಬೆಂಗಳೂನಿಂದ ದೇವನಹಳ್ಳಿ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಂದ ದ್ವಿಚಕ್ರ ವಾಹನವೊಂದು ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ.
ಪರಿಣಾಮ ರಸ್ತೆಗೆ ಕುಸಿದು ಬಿದ್ದ ಅವರ ಕೈಕಾಲುಗಳಿಗೆ ಗಾಯವಾಗಿದ್ದು, ನಂತರ ಸ್ನೇಹಿತರು ಆ್ಯಂಬುಲೆನ್ಸ್‍ಗೆ ಕರೆ ಮಾಡಿ ಅದು ಬರುವಷ್ಟರಲ್ಲಿ ನಾಗೇಶ್ ಕೊನೆಯುಸಿರೆಳೆದಿದ್ದಾನೆ. ಅಪಘಾತವೆಸಗಿ ಪರಾರಿಯಾಗಿರುವ ದ್ವಿಚಕ್ರ ವಾಹನ ಸವಾರನ ಪತ್ತೆಗೆ ದೇವನಹಳ್ಳಿ ಸಂಚಾರಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಬಗ್ಗೆ ಬಾಲಾಜಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೇವನಹಳ್ಳಿ ಸಂಚಾರಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
