ಉದಯವಾಹಿನಿ, ಬೀದರ್: ರಾಜ್ಯದ ಮುಕುಟಪ್ರಾಯವಾದ ಬೀದರ್ ಜಿಲ್ಲೆಯಲ್ಲಿ ಜನೆವರಿ ತಿಂಗಳು ಪೂರ್ತಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ನಡೆಯುವ ಸಂಪ್ರದಾಯ ಪ್ರತಿ ವರ್ಷ ಜರುಗುತ್ತದೆ. ಅದರಲ್ಲೂ ವಿಶೇಷವಾಗಿ ಶರಭವತಾರ ಹಾಗೂ ಕಾಳಂಕಿ ರುದ್ರ ವೇಷಧಾರಿ ಶ್ರೀ ವೀರಭದ್ರೇಶ್ವರನ ಜಾತ್ರೆ ನಡೆಯುವುದು ಸಾಮಾನ್ಯ. ಈ ವರ್ಷ ಸಹ ಜಿಲ್ಲೆಯ ಹುಮನಾಬಾದ್, ಭಾಲ್ಕಿ ಪಟ್ಟಣ, ಬೀದರ್ ತಾಲೂಕಿನ ಕಮಠಾಣಾ ಹಾಗೂ ಭಾಲ್ಕಿ ತಾಲೂಕಿನ ಗಡಿ ಗ್ರಾಮ ಕಾಳಸರತುಗಾಂವ ಸೇರಿವೆ.
ಸೋಮವಾರ ರಾತ್ರಿ ಕಾಳಸರತುಗಾಂವ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಡಗರ ಹಾಗೂ ಸಂಪ್ರದಾಯವಾಗಿ ಶ್ರೀ ವೀರಭದ್ರೇಶ್ವರರ ವಿವಾಹ ಮಹೋತ್ಸವ ಸಂಪನ್ನಗೊಂಡಿತ್ತು.
ಜನೆವರಿ 15ರಿಂದ 19ರ ವರೆಗೆ ಶ್ರೀ ವೀರಭದ್ರೇಶ್ವರರ ಜಾತ್ರಾ ಮಹೋತ್ಸವ ಭಕ್ತಿ ಭಾವದಲ್ಲಿ ಜರುಗುವುದು ರೂಢಿ. ಈ ತಿಂಗಳ 10ರಂದು ದೇವರಿಗೆ ಅರಶಿಣ ಹಚ್ಚುವ ಕಾರ್ಯಕ್ರಮ ಜರುಗಿದ್ದು, ಅಂದಿನಿಂದಲೇ ಜ.18ರ ವರೆಗೆ ದೇವರಿಗೆ ಊರ ಸುಮಂಗಲೆಯರಿಂದ ಆರತಿ ಬೆಳಗುವ ಸಂಪ್ರದಾಯ ಜರುಗುತ್ತದೆ. ಸೋಮವಾರ ರಾತ್ರಿ ಎಂದಿನಂತೆ ವೀರಭದ್ರ ದೇವರ ಹಾಗೂ ಕಾಳಿಕಾ ಮಾತೆಯ ವಿವಾಹ ಮಹೋತ್ಸವ ಸಂಪನ್ನಗೊಂಡಿತು.
ಸ್ಥಳಿಯ, ಸುತ್ತಲಿನ ಗ್ರಾಮಗಳಾದ ಕಾಳಸರತುಗಾಂವ ವಾಡಿ, ಶಿವಣಿ, ಭಾಡಸಾಂಗವಿ, ಬೋಳೆಗಾಂವ, ಅಟ್ಟರ್ಗಾ, ಮಾಣಕೇಶ್ವರ, ಲಾಸೋಣಾ ಗ್ರಾಮಗಳಿಂದ ಜನರು ಬೀಗರ ರೂಪದಲ್ಲಿ ಹಾಜರಾಗಿ ದೇವರಿಗೆ ಶುಭ ಕೋರಿದರು. ಪ್ರತಿಯಾಗಿ ವೀರಭದ್ರನಿಂದ ಆಶಿರ್ವಾದ ಸ್ವೀಕರಿಸಿ ವಾಪಸ್ಸಾದರು.
ಗ್ರಾಮದ ಮುತೈದೆಯರು ದೇವರಿಗೆ ಮಂಗಳಾರತಿ ನೆರವೇರಿಸಿದರು.
