ಉದಯವಾಹಿನಿ, ದೇವನಹಳ್ಳಿ: ಮುಂಬೈನಿಂದ ಹೊರಟಿದ್ದ ವಿಮಾನದ ಶೌಚಾಲಯ ಬಾಗಿಲು ತೆರೆಯಲು ಸಾಧ್ಯವಾಗದ ಕಾರಣ ಪ್ರಯಾಣಿಕ ರೊಬ್ಬರು ಬೆಂಗಳೂರಿ ನವರೆಗೆ ಒಂದೂವರೆ ತಾಸುಶೌಚಾಲಯದಲ್ಲಿಯೇ ಕುಳಿತು ಪ್ರಯಾಣ ಮಾಡಿದ್ದಾರೆ.ಮುಂಬೈನಿಂದ ಮಂಗಳವಾರ ರಾತ್ರಿ 10.45ಕ್ಕೆ ಹೊರಡಬೇಕಿದ್ದ ಸ್ಪೈಸ್ ಜೆಟ್ ವಿಮಾನ ತಡವಾಗಿ ರಾತ್ರಿ 2ಕ್ಕೆ ಹೊರಟಿತ್ತು.
ಸಂಚಾರ ಆರಂಭಿಸಿದ ತುಸು ಹೊತ್ತಿನಲ್ಲಿಯೇ ಪ್ರಯಾಣಿಕರೊಬ್ಬರು ಮೂತ್ರ ವಿಸರ್ಜನೆಗೆಂದು ಶೌಚಾಲಯಕ್ಕೆ ತೆರಳಿದ್ದರು. ಆದರೆ, ಹೊರಗೆ ಬರಲು ಶೌಚಾಲಯದ ಬಾಗಿಲಿನ ಚಿಲಕ ಬಿಗಿಯಾಗಿ ತೆರೆಯಲು ಸಾಧ್ಯವಾಗಲಿಲ್ಲ.
ಒಳಗೆ ಸಿಲುಕಿಕೊಂಡ ಪ್ರಯಾಣಿಕ ನೆರವಿಗಾಗಿ ಪ್ಯಾನಿಕ್ ಬಟನ್ ಒತ್ತಿದ್ದಾರೆ. ನೆರವಿಗೆ ಧಾವಿಸಿದ ವಿಮಾನ ಸಿಬ್ಬಂದಿಗೂ ಬಾಗಿಲು ತೆರಯಲು ಸಾಧ್ಯವಾಗಿಲ್ಲ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
‘ನಮ್ಮಿಂದಲೂ ಬಾಗಿಲು ತೆರೆಯಲು ಆಗುತ್ತಿಲ್ಲ. ನೀವು ಆತಂಕಕ್ಕೆ ಒಳಗಾಗಬೇಡಿ. ಕೆಲವೇ ನಿಮಿಷಗಳಲ್ಲಿ ವಿಮಾನ ಬೆಂಗಳೂರಿನಲ್ಲಿ ಇಳಿಯಲಿದೆ. ಶೌಚಾಲಯ ಕಮೋಡ್ ಮುಚ್ಚಿ ಅದರ ಮೇಲೆ ಕುಳಿತುಕೊಳ್ಳಿ. ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಆಗುತ್ತಿದ್ದಂತೆಯೇ ಅಲ್ಲಿಯ ಸಿಬ್ಬಂದಿ ಬಂದು ಶೌಚಾಲಯ ಬಾಗಿಲು ತೆರೆಯಲಿದ್ದಾರೆ’ ಎಂದು ಗಗನಸಖಿಯೊಬ್ಬರು ಚೀಟಿ ಬರೆದು ಶೌಚಾಲಯ ಬಾಗಿಲಿನ ಸಂದಿಯಿಂದ ಪ್ರಯಾಣಿಕನಿಗೆ ನೀಡಿದ್ದಾರೆ. ಈ ಬಗ್ಗೆ ಸಿಬ್ಬಂದಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿದ್ದರು.
