ಉದಯವಾಹಿನಿ, ಬೆಂಗಳೂರು: ವಿದ್ಯುತ್ ತಗುಲಿ ಬಾಲಕನೊಬ್ಬ ಬಲಿಯಾಗಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿಯಲ್ಲಿ ನಡೆದಿದೆ.ಮಂಚೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಈ ದುರ್ಘಟನೆ ನಡೆದಿದ್ದು, ಮೀನಾಕ್ಷಿ-ಮೂರ್ತಿ ದಂಪತಿಗಳ ಪುತ್ರ ನಾಗೇಂದ್ರ (೮) ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದಾನೆ.
ರಸ್ತೆ ದಾಟಲು ಹೋದ ಸಂದರ್ಭ ಟ್ರಾನ್ಸ್‌ಫಾರ್ಮರ್ ಗ್ರೌಂಡಿಂಗ್ ವೈರ್‌ನಿಂದ ವಿದ್ಯುತ್ ಶಾಕ್ ತಗುಲಿ ಬಾಲಕ ನಾಗೇಂದ್ರ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ರಸ್ತೆ ಅಗಲೀಕರಣಕ್ಕಾಗಿ ಟ್ರಾನ್ಸ್‌ಫಾರ್ಮರ್ ಬಳಿ ಮಣ್ಣು ತೆಗೆಯಲಾಗಿತ್ತು. ಮಣ್ಣು ತೆಗೆದ ಪರಿಣಾಮ ಹೊಂಡದಲ್ಲಿ ನೀರು ಶೇಖರಣೆಯಾಗಿದೆ. ರಸ್ತೆ ದಾಟಲು ಟ್ರಾನ್ಸ್‌ಫಾರ್ಮರ್ ಬದಿಯಲ್ಲಿ ಹೋಗುವಾಗ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
