ಉದಯವಾಹಿನಿ, ಬೆಂಗಳೂರು: ಭಾರದ ಪರೀಕ್ಷೆ (ಲೋಡ್ ಟೆಸ್ಟಿಂಗ್) ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಬಂದ್ ಆಗಿದ್ದ ನಗರದಿಂದ ಸುಮಾರು ೧೮ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೪ ರ ಪೀಣ್ಯದ ಡಾ.ಶಿವಕುಮಾರ ಸ್ವಾಮೀಜಿ ಫ್ಲೈಓವರ್ ನಲ್ಲಿ ಇಂದು ಬೆಳಗ್ಗೆ ೧೧ರಿಂದ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ.
ಕಳೆದ ಮೂರು ದಿನಗಳಿಂದ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿದ್ದ ಸಾರ್ವಜನಿಕರು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡುತ್ತಿದ್ದಂತೆ ಸವಾರರು ನಿಟ್ಟುಸಿರು ಬಿಡುವಂತಾಗಿದೆ.
ಯಾವುದೇ ಘನ ವಾಹನಗಳಿಗೆ ಸಂಚಾರಕ್ಕೆ ಅವಕಾಶವಿಲ್ಲ. ಮೊದಲಿಗೆ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬಸ್‌ಗಳು, ಮತ್ತು ಆರು ಚಕ್ರದ ವಾಹನಗಳಿಗೆ ಅವಕಾಶವಿಲ್ಲ. ಬೈಕ್, ಕಾರು, ನಾಲ್ಕು ಚಕ್ರದ ವಾಹನಗಳಿಗೆ ಮೊದಲಿನಂತೆ ಸಂಚಾರಕ್ಕೆ ಮುಕ್ತವಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ೪ರ ಪೀಣ್ಯ ಡಾ.ಶಿವಕುಮಾರ ಸ್ವಾಮೀಜಿ ಮೇಲುಸೇತುವೆಗೆ ಅಳವಡಿಸಿದ್ದ ವಯಾಡಕ್ಟ್ ದುರಸ್ಥಿ ಇತ್ತು. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದುರಸ್ಥಿ ಕಾರ್ಯವನ್ನು ಕೈಗೆತ್ತಿಕೊಂಡು, ವಾಹನಗಳ ಸಂಚಾರವನ್ನು ನಿರ್ಬಂಧಿಸಬೇಕೆಂದು ಕೋರಿತ್ತು.
ವಯಾಡಕ್ಟ್ ಸಮಗ್ರತೆಯ ಪರಿಶೀಲನೆಯನ್ನು ನಡೆಸಲು ಲೋಡ್ ಟೆಸ್ಟಿಂಗ್ ಮಾಡಬೇಕಾಗಿತ್ತು. ಈ ನಿಟ್ಟಿನಲ್ಲಿ ಪೀಣ್ಯ ಎಲಿವೇಟೆಡ್ ಫ್ಲೈಓವರ್ ರಸ್ತೆಯಲ್ಲಿ ಕಳೆದ ೧೬ರ ರಾತ್ರಿ ೧೧ ಗಂಟೆಯಿಂದ ೧೯ರ ಬೆಳಗ್ಗೆ ೧೧ ಗಂಟೆವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು.
ಲೋಡ್ ಟೆಸ್ಟಿಂಗ್ ಕಾರ್ಯವು ಪೂರ್ಣಗೊಂಡಿದ್ದು, ಸವಾರರು ಫ್ಲೈಓವರ್ ಬಳಸಬಹುದಾಗಿದೆ. ಈಗಾಗಲೇ ಫ್ಲೈಓವರ್ ಮುಂಭಾಗ ಅಳವಡಿಸಿದ್ದ ಬ್ಯಾರಿಕೇಡ್‌ಗಳನ್ನು ತೆರವು ಮಾಡಲಾಗಿದೆ.
