ಉದಯವಾಹಿನಿ, ಬೆಂಗಳೂರು: ಜಿಲ್ಲಾಧಿಕಾರಿಗಳು ಕಚೇರಿಯಲ್ಲಷ್ಟೇ ಕುಳಿತುಕೊಂಡರೆ ಸಾಲುವುದಿಲ್ಲ, ಕ್ಷೇತ್ರಗಳಿಗೂ ಭೇಟಿ ನೀಡಿ ಕೆಲಸ ಮಾಡಬೇಕೆಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಾಕೀತು ಮಾಡಿದ್ದಾರೆ. ವಿಕಾಸಸೌಧದಲ್ಲಿಂದು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಆನ್‍ಲೈನ್‍ನಲ್ಲಿ ಸಭೆ ನಡೆಸಿದ ಸಚಿವರು, ಕಂದಾಯ ಇಲಾಖೆ ಬೇರೆಲ್ಲಾ ಇಲಾಖೆಗಳಿಗಿಂತಲೂ ಹೆಚ್ಚಿನ ಕೆಲಸ ಮಾಡಬೇಕೆಂದು ತಾಕೀತು ಮಾಡಿದ್ದಾರೆ.ಡಿಜಿಟಲೀಕರಣಕ್ಕೆ ಕೇಂದ್ರ ಸರ್ಕಾರದಿಂದ 500 ಕೋಟಿ ರೂ. ಹಣ ಅನುದಾನ ದೊರೆತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಹಸೀಲ್ದಾರ್, ನೋಂದಣಾಧಿಕಾರಿಗಳು ಹಾಗೂ ನಾಡ ಕಚೇರಿಗಳಲ್ಲಿನ ದಾಖಲಾತಿಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.ಸರ್ವೆ ಕೆಲಸಗಳಿಗೆ ವೇಗ ನೀಡಬೇಕಾಗಿದೆ. ಇದಕ್ಕೆ ಅಗತ್ಯವಿರುವ ಸರ್ವೆಯರ್‍ಗಳನ್ನು ನೇಮಕ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಯವರು ನೇಮಕಾತಿಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು. ಜಿಲ್ಲಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ನಕಾಶೆ ರಸ್ತೆ ನೀಡಲು ವಿಳಂಬ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ತಾವು ಜಿಲ್ಲೆಗಳಿಗೆ ಭೇಟಿ ನೀಡಿದಾಗ ಈ ರೀತಿಯ ಸಮಸ್ಯೆಗಳು ಹೆಚ್ಚು ಕೇಳಿಬರುತ್ತಿವೆ ಎಂದು ತಿಳಿಸಿದರು.
ಫೆಬ್ರವರಿ ಮೊದಲ ವಾರದೊಳಗೆ ಎಲ್ಲಾ ತಾಲೂಕುಗಳಲ್ಲೂ ತಹಸೀಲ್ದಾರರು ಬರನಿರ್ವಹಣೆ ಸೇರಿದಂತೆ ಇತರೆ ವಿಚಾರಗಳ ಕುರಿತು ಕಾರ್ಯಪಡೆಯ ಸಭೆಗಳನ್ನು ನಡೆಸಬೇಕು. ಅರ್ಹ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಬೇಕೆಂದು ಸೂಚನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!