ಉದಯವಾಹಿನಿ, ಬೆಂಗಳೂರು: 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಅಂದು ರಜೆಯನ್ನು ಘೋಷಿಸುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆದ ಎಸ್‍ಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಈಗಾಗಲೇ ಅನೇಕ ರಾಜ್ಯಗಳು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುವಂತೆ ರಜೆ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರವು ಅರ್ಧದಿನವನ್ನು ರಜೆ ಎಂದು ಘೋಷಿಸಿದೆ. ಅದೇ ರೀತಿ ರಾಜ್ಯದಲ್ಲೂ ಘೋಷಣೆ ಮಾಡಲಿ ಎಂದು ಮನವಿ ಮಾಡಿದರು.
ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿರುವುದರಿಂದ ರಾಮ ಭಕ್ತರಿಗೆ ಪೂಜೆ, ಪುನಸ್ಕಾರ ಹಾಗು ಕಾರ್ಯಕ್ರಮವನ್ನು ಖುದ್ದು ವೀಕ್ಷಣೆ ಮಾಡಲು ಅನುಕೂಲ ಮಾಡಿಕೊಡುವುದು ಸರ್ಕಾರದ ಕರ್ತವ್ಯ ಎಂದರು. ರಾಮನ ಬಗ್ಗೆ ಇಂದು ಪುಂಖಾನುಪುಂಖವಾಗಿ ಮಾತನಾಡುತ್ತಿರುವ ಕಾಂಗ್ರೆಸ್‍ನವರು ಒಂದು ಕಾಲದಲ್ಲಿ ರಾಮನ ಅಸ್ತಿತ್ವವನ್ನೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದವರು , ರಾಮನಿಲ್ಲ ಎಂದವರು ಇಂದು ಶ್ರೀರಾಮನನ್ನು ನೆನಪಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ವ್ಯಂಗ್ಯವಾಡಿದರು. ಪ್ರಭು ಶ್ರೀರಾಮಚಂದ್ರನ ಅಸ್ತಿತ್ವದ ಪ್ರಶ್ನೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷದವರಿಗೆ ನನ್ನ ಮನವಿ ಏನೆಂದರೆ, ರಾಮನ ಬಗ್ಗೆ ಮಾತನಾಡುತ್ತೇವೆ ಎಂದರೆ ಮೊದಲು ಮಹರ್ಷಿ ವಾಲ್ಮೀಕಿಯವರನ್ನು ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದರು.
