ಉದಯವಾಹಿನಿ,ಬೆಂಗಳೂರು: ಅಯೋಧ್ಯೆ ಕಾರ್ಯಕ್ರಮದ ಸಂದರ್ಭದಲ್ಲಿ ರಾಜ್ಯದಲ್ಲಿ ಗೋದ್ರಾ ಮಾದರಿಯ ಹಿಂಸಾಚಾರ ನಡೆಯುವ ಸಾಧ್ಯತೆಯಿದೆ ಎಂದು ತಾವು ನೀಡಿರುವ ಹೇಳಿಕೆಗೆ ಈಗಲೂ ಬದ್ಧವಾಗಿರುವುದಾಗಿ ತಿಳಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್, ನನ್ನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿ, ಮಂಪರು ಪರೀಕ್ಷೆ ಮಾಡಿ ಎಂದು ಸವಾಲು ಹಾಕಿದರು.
ಬೆಂಗಳೂರಿನ ಸರ್ಕಾರಿ ಅತಿಥಿಗೃಹದಲ್ಲಿ ಹರಿಪ್ರಸಾದ್‍ರ ಹೇಳಿಕೆ ಪಡೆಯಲು ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು. ಅದಕ್ಕೆ ಉತ್ತರ ನೀಡದೇ ವಾಪಸ್ ಕಳುಹಿಸಿರುವ ಹರಿಪ್ರಸಾದ್, ನನಗೆ ವಿವಿಐಪಿ ಉಪಚಾರ ಬೇಡ. ಠಾಣೆಗೆ ಕರೆದುಕೊಂಡು ಹೋಗಿ, ವಿಚಾರಣೆ ಮಾಡಿ, ಬಹಿರಂಗವಾಗಿ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಸವಾಲು ಹಾಕಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ವೇಳೆ ರಾಜ್ಯದಿಂದ ತೆರಳುವವರ ಮೇಲೆ ಗೋದ್ರಾ ಮಾದರಿಯಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯಸರ್ಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ನಾನು ಹೇಳಿಕೆ ನೀಡಿದ್ದೆ. ಇದು ಸಾರ್ವಜನಿಕ ಹಿತದೃಷ್ಟಿಯಿಂದ ಮಾತನಾಡಿದ ವಿಷಯ. ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.
ಹೇಳಿಕೆಯ ಆಧರಿಸಿ ವಿಚಾರಣೆ ಮಾಡಲು ಪೊಲೀಸರು ಬಂದಿದ್ದರು. ನನ್ನ ಹೇಳಿಕೆ ಸರಿಯಲ್ಲ ಎಂದಾದರೆ ಠಾಣೆಗೆ ಕರೆದುಕೊಂಡು ಹೋಗಿ, ಇಲ್ಲಿ ನಾನು ಹೇಳಿಕೆ ನೀಡುವುದಿಲ್ಲ. ಜೊತೆಗೆ ಬಿಜೆಪಿಯ ರಾಜ್ಯಾಧ್ಯಕ್ಷನನ್ನೂ ಕರೆತನ್ನಿ, ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಪೊಲೀಸರಿಗೆ ತಿಳಿಸಿರುವುದಾಗಿ ಹೇಳಿದರು. ಗೋದ್ರಾ, ಅಯೋಧ್ಯೆಯಂತಹ ಘಟನೆಗಳು ಗೃಹಸಚಿವರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಸಂಪೂರ್ಣ ಸರ್ಕಾರದ ಹೊಣೆಗಾರಿಕೆಯಿರುತ್ತದೆ. ಬಿಜೆಪಿಯಲ್ಲಿ ನಾಲ್ಕೂವರೆ ವರ್ಷ ಉಸ್ತುವಾರಿ ವಹಿಸಿದ್ದೆ. ಅವರು ಯಾವ ರೀತಿ ಕೆಲಸ ಮಾಡುತ್ತಾರೆ ಎಂದು ನನಗೆ ಗೊತ್ತಿದೆ. ಆ ನಿಟ್ಟಿನಲ್ಲಿ ಹೇಳಿದ್ದ ಮಾತುಗಳಿಗೆ ನನ್ನನ್ನು ವಿಚಾರಣೆ ಮಾಡುತ್ತಾರೆಂದರೆ ಅಚ್ಚರಿಯಾಗುತ್ತದೆ.
