ಉದಯವಾಹಿನಿ, ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಬಿಜೆಪಿ ಪ್ರಧಾನಿ ನರೇಂದ್ರಮೋದಿ ಆಗಮನದ ಹಿನ್ನಲೆಯಲ್ಲಿ ಪುಟಿದೆದ್ದಿದೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮಹಾರಾಷ್ಟ್ರ ಮತ್ತು ತಮಿಳುನಾಡಿಗೆ ಆಗಮಿಸಿದ್ದ ಮೋದಿ ಅವರು, ರಾಜ್ಯದ ಬಿಜೆಪಿ ನಾಯಕರ ಜೊತೆ ಲೋಕಸಭೆ ಚುನಾವಣೆ ಕುರಿತಾಗಿ ನಡೆಸಿರುವ ಚರ್ಚೆ ಬಿಜೆಪಿಗೆ ಬೂಸ್ಟ್ ಸಿಕ್ಕಂತಾಗಿದೆ.
ಮೊದಲು ಮಹಾರಾಷ್ಟ್ರದ ಸೊಲ್ಲಾಪುರ ಕಾರ್ಯಕ್ರಮ ಮುಗಿಸಿಕೊಂಡು ಕಲಬುರಗಿಗೆ ಆಗಮಿಸಿದ ಮೋದಿ ಅವರು 30 ಪ್ರಮುಖ ನಾಯಕರನ್ನು ಮಾತ್ರ ಭೇಟಿಯಾಗಿ ರಾಜ್ಯದಲ್ಲಿ ಪಕ್ಷದ ಸ್ಥಿತಿಗತಿ ಕುರಿತು ಮಾಹಿತಿ ಪಡೆದುಕೊಂಡರು. ಕೇಂದ್ರ ಸಚಿವ ಭಗವಂತ ಕೂಬಾ ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಜಿಲ್ಲೆಯ ಕೆಲವೇ ಕೆಲವು ಆಯ್ದ 30 ನಾಯಕರ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ.
ಲೋಕಸಭೆ ಚುನಾವಣೆಯನ್ನು ಪ್ರತಿಯೊಬ್ಬರು ಗಂಭೀರವಾಗಿ ತೆಗೆದುಕೊಳ್ಳಬೇಕು. ಬಿಜೆಪಿ ಈ ಬಾರಿ 400 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ನಮಗೆ ಒಂದೊಂದು ಕ್ಷೇತ್ರವು ಮುಖ್ಯ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ ಪಕ್ಷ 20ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಯಾವುದೇ ರೀತಿಯ ವಿವಾದವನ್ನು ಮೈಮೇಲೆ ಎಳೆದುಕೊಳ್ಳದೆ ಕೇಂದ್ರ ಸರ್ಕಾರ ಕಳೆದ 9 ವರ್ಷಗಳ ಅವಧಿಯಲ್ಲಿ ಮಾಡಿರುವ ಸಾಧನೆಗಳನ್ನುಮನೆ ಮನೆಗೆ ತಲುಪಿಸಿ ಒಂದೇ ಒಂದು ಹಗರಣವಿಲ್ಲದೆ ಪಾರದರ್ಶಕ ಆಡಳಿತ ಕೊಟ್ಟಿದ್ದೇವೆ. ಇದನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು.
ಇಂದಿನಿಂದ ಲೋಕಸಭೆ ಚುನಾವಣೆವರೆಗೂ ಕಾರ್ಯಕರ್ತರು ವಿಶ್ರಾಂತಿ ಇಲ್ಲದೆ ದುಡಿಯಬೇಕೆಂದು ಸೂಚನೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನತೆಯ ಮುಂದಿಡಲು ಹಿಂದೆ ಮುಂದೆ ನೋಡಬೇಡಿ. ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಗೆಲುವು ಸಾಧ್ಯ ಎಂದು ಮುಖಂಡರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕಲಬುರಗಿಯಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ ಮೋದಿಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರರು ಬರಮಾಡಿಕೊಂಡರು.

Leave a Reply

Your email address will not be published. Required fields are marked *

error: Content is protected !!