ಉದಯವಾಹಿನಿ, ಬೆಂಗಳೂರು: ನಿಗಮ ಮಂಡಳಿಗಳ ನೇಮಕಾತಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಶಾಸಕರ ಅಧ್ಯಕ್ಷತೆ ಪಟ್ಟಿಯನ್ನು ಅಖೈರುಗೊಳಿಸಿದ್ದಾರೆ. ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಯ ಅಂತಿಮ ಸ್ಪರ್ಶಕ್ಕಾಗಿ ಇಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿದಂತೆ ಕೆಲವು ನಾಯಕರು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಹತ್ವದ ಸಭೆ ನಡೆಸಿದರು. ಸುಮಾರು 2 ತಿಂಗಳಿನಿಂದಲೂ ನಿಗಮ ಮಂಡಳಿಗಳ ನೇಮಕಾತಿ ಇಂದು, ನಾಳೆ ಎನ್ನುತ್ತಲೇ ಮುಂದೂಡಿಕೆಯಾಗುತ್ತಿದೆ. ಸಂಕ್ರಾಂತಿ ಹಬ್ಬದ ಬಳಿಕ ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಈ ಕ್ಷಣಕ್ಕೆ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಘೋಷಿಸಿದ್ದರು.
ಆದರೆ ಮೂರ್ನಾಲ್ಕು ದಿನ ಕಳೆದರೂ ನೇಮಕಾತಿ ಪಟ್ಟಿ ಹೊರಬಂದಿಲ್ಲ. ಇದು ಕಾರ್ಯಕರ್ತರಲ್ಲಿ ಅಸಮಾಧಾನವನ್ನು ಹೆಚ್ಚಿಸಿದೆ. 34 ಮಂದಿ ಶಾಸಕರು ಹಾಗೂ 39 ಮಂದಿ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದರು. ಅದರ ಬಳಿಕವೂ ಮತ್ತಷ್ಟು ಹೆಸರುಗಳ ಸೇರ್ಪಡೆಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.
ಇಂದಿನ ಸಭೆಯಲ್ಲಿ 37 ಶಾಸಕರ ಹಾಗೂ 39 ಕಾರ್ಯಕರ್ತರ ನಿಗಮ ಮಂಡಳಿಯ ಹಂಚಿಕೆ ಕುರಿತು ಚರ್ಚೆ ನಡೆಸಲಾಗಿದೆ.

Leave a Reply

Your email address will not be published. Required fields are marked *

error: Content is protected !!