ಉದಯವಾಹಿನಿ, ಮಾಲೂರು: ಮಹಾಯೋಗಿ ವೇಮನರ ಸಾಹಿತ್ಯ ಮತ್ತು ತತ್ವಪದಗಳನ್ನು ಕಿರು ಪುಸ್ತಕದಲ್ಲಿ ಮುದ್ರಿಸಿ ಯುವ ಪೀಳಿಗೆಗೆ ವಿತರಿಸಿದಾಗ ಮಹಾನ್ ದಾರ್ಶನಿಕರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೋಳ್ಳಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿಯ ತಹಶಿಲ್ದಾರ್ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ರೆಡ್ಡಿ ಜನಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಮಹಾಯೋಗಿ ವೇಮನರ ೫೧೨ನೇ ಜಯಂತಿ ಕಾರ್ಯಕ್ರಮದಲ್ಲಿ ಮಹಾ ಯೋಗಿ ವೇಮನರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ವೇಮನರು ರಚಿಸಿದ ಪದ್ಯಗಳು ಮಾನವನ ಜೀವಿತದಲ್ಲಿ ತೊಡಗಿಸಿಕೊಳ್ಳುವ ರತ್ನಗಳಾಗಿವೆ ಅವರು ರಚಿಸಿರುವ ಕವನಗಳು, ತತ್ವ ಪದ್ಯಗಳು ಇತರೆ ಭಾಷೆಗಳಿಗೆ ಅನುವಾದಗೊಂಡಿವೆ. ಹೀಗಾಗಿ ವೇಮನರ ಸಾಹಿತ್ಯ ಎಲ್ಲ ಭಾಷಾ ಸಾಹಿತ್ಯಗಳನ್ನು ಶ್ರಿಮಂತಗೊಳಿಸಿದೆ. ಇಂತಹ ಸಾಹಿತ್ಯವನ್ನು ಕಿರು ಪುಸ್ತಕದಲ್ಲಿ ಮುದ್ರಿಸಿ ಶಾಲಾ ಕಾಲೇಜಿನ ಮಕ್ಕಳಿಗೆ ವಿತರಿಸಿ ಅವರ ಹಾದಿಯನ್ನು ಪಾಲನೆ ಮಾಡಬೇಕು, ಪಟ್ಟಣದಲ್ಲಿ ಮಹಾ ಯೋಗಿ ವೇಮನ ಪುತ್ಥಳಿ ಸ್ಥಾಪನೆಗೆ ರೆಡ್ಡಿ ಜನ ಸಂಘದವರು ಮನವಿ ಮಾಡಿದ್ದು, ರಸ್ತೆಗೆ ವೇಮನರ ಹೆಸರು ಹಾಗೂ ಪುತ್ತಳಿ ಇಡಲು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅವಕಾಶ ಕಲ್ಪಿಸಲಾಗುವುದು ಎಂದರು.
ತಾಲ್ಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷ ಎಂ.ಎಸ್.ಪ್ರದೀಪ್ ರೆಡ್ಡಿ ಮಾತನಾಡಿ, ವೇಮನ ೧೪ನೇ ಶತಮಾನದ ಕವಿಗಳಲ್ಲಿ ಪ್ರಮುಖ ಹೆಸರು, ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳುವರ್ ಅವರಂತೆ ವೇಮನ ಜನಕವಿಯಾಗಿ ಅವರ ಸಾಮಾಜಿಕ ಸುಧಾರಣೆಯ ಸಾಹಿತ್ಯ ಜಗತ್ತಿಗೆ ವೈಚಾರಿಕತೆಯ ಬೆಳಕಾಗಿದೆ. ದಾರ್ಶನಿಕರಾದ ವೇಮನ ಸಾವಿರಾರು ವಚನಗಳನ್ನು ಬರೆಯುವುದರ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ತೀಡುವಲ್ಲಿ ವ್ಯವಸ್ಥೆಯ ಬೆಳಕಾದರು. ಜೀವನ ಮೌಲ್ಯಗಳಲ್ಲಿ ಅಂದು ತಮ್ಮ ತತ್ವಪದಗಳ ಮೂಲಕ ಹಂಚಿಕೊಂಡ ಜ್ಞಾನವು ಇಂದು ಜನರಿಗೆ ದಾರಿ ದೀಪವಾಗಿದ್ದು, ಇಂದಿನ ಯುವ ಪೀಳಿಗೆಯು ಮಹನೀಯರ ದಾರಿಯಲ್ಲಿ ನಡೆಯಬೇಕು ಇನ್ನೂ ತಾಲ್ಲೂಕು ಮಟ್ಟದ ಅಧಿಕಾರಿಗಳು ವೇಮನ ರೆಡ್ಡಿ ಅವರ ಜಯಂತಿಯನ್ನು ಆಚರಿಸಲು ನಿರ್ಲಕ್ಷ್ಯ ತೋರುತ್ತಿದ್ದಾರೆ. ಹಿಂದಿನ ದಿನಗಳಲ್ಲಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಸಮಾಜ ಸುಧಾರಕರಾದ ಮಹಾನ್ ವ್ಯಕ್ತಿಯ ವೇಮನರವರ ಪುತ್ಥಳಿಗೆ ಪ್ರಮುಖ ರಸ್ತೆ, ವೃತ್ತದಲ್ಲಿ ನಿರ್ಮಾಣ ಮಾಡಲು ಅವಕಾಶ ನೀಡದರೆ ಮುಂದಿನ ವೇಮನ ಜಯಂತಿಗೆ ಉದ್ಘಾಟನೆ ಮಾಡಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!