ಉದಯವಾಹಿನಿ, ವಿಜಯಪುರ: ರಸಭೆಗೆ ಸೇರಿದ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ಮುಂದಾಗಿದ್ದ ಪುರಸಭೆಯವರ ನಡೆಯನ್ನು ವಿರೋಧಿಸುತ್ತಿರುವ ರೋಟರಿ ಸಂಸ್ಥೆಯವರು ಕಳೆದ ೪೦ ವರ್ಷಗಳಿಂದ ಶಾಲಾ ಮಕ್ಕಳ ಆಟದ ಮೈದಾನವನ್ನಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶಾಲಿನಿ ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು.
ಪುರಸಭೆಯ ಪಕ್ಕದಲ್ಲಿರುವ ಪುರಸಭೆಯ ಜಾಗವನ್ನು ರೋಟರಿ ಶಾಲೆಯ ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳುತ್ತಿದ್ದು, ಈ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಜಾಗ ಗುರ್ತಿಸಿದ್ದರು. ಇದಕ್ಕೆ ರೋಟರಿ ಸಂಸ್ಥೆಯವರು ತೀವ್ರ ವಿರೋಧ ಮಾಡಿ, ಈ ಜಾಗವನ್ನು ಶಾಲೆಗೆ ಬಿಟ್ಟುಕೊಡಿ, ಇದನ್ನು ಹೊರತುಪಡಿಸಿ ನಮಗೆ ಬೇರೆ ಜಾಗವಿಲ್ಲವೆಂದು ಮನವಿ ಸಲ್ಲಿಸಿದ್ದರು.
ಯೋಜನಾ ನಿರ್ದೇಶಕಿ ಶಾಲಿನಿ ಅವರು, ರೋಟರಿ ಸಂಸ್ಥೆಯವರ ಸಮ್ಮುಖದಲ್ಲಿ ಪುರಸಭೆ ಅಧಿಕಾರಿಗಳ ಮೂಲಕ ಪುರಸಭೆಗೆ ಸೇರಿದ ಜಾಗವನ್ನು ಅಳತೆ ಮಾಡಿಸಿದರು. ರೋಟರಿ ಸಂಸ್ಥೆಯ ಕಟ್ಟಡಗಳು, ನಿರ್ಮಾಣ ಹಂತದಲ್ಲಿರುವ ಶಾಲಾ ಕಟ್ಟಡದ ಜಾಗ, ಸೇರಿದಂತೆ ಸಂತೆ ಮೈದಾನದ ಪಕ್ಕದಲ್ಲಿರುವ ಜಾಗವನ್ನು ಪರಿಶೀಲನೆ ನಡೆಸಿದರು. ಅಧಿಕಾರಿಗಳ ಬಳಿಯಿದ್ದ ನಕ್ಷೆಯನ್ನು ಪರಿಶೀಲನೆ ನಡೆಸಿದರು.
ಈ ವೇಳೆ ರೋಟರಿ ಸಂಸ್ಥೆಯ ಅಧ್ಯಕ್ಷ ಸಿ.ಬಸಪ್ಪ ಅವರು, ಈ ಜಾಗದಲ್ಲಿ ನಾವು ಮಕ್ಕಳಿಗೆ ಶಿಕ್ಷಣ ಮಾತ್ರ ಕೊಡುತ್ತಿಲ್ಲ. ಉಚಿತ ಕಣ್ಣಿನ ತಪಾಸಣಾ ಶಿಬಿರಗಳನ್ನು ಮಾಡುತ್ತಿದ್ದೇವೆ. ಕ್ಯಾನ್ಸರ್ ರೋಗಿಗಳಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡುತ್ತಿದ್ದೇವೆ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳಿಗೆ ಅಂಗವಿಕಲರು, ವೃದ್ದರು. ರೋಗಿಗಳು ವಾಹನಗಳಲ್ಲಿ ಇಲ್ಲಿಗೆ ಬರುತ್ತಾರೆ. ಈಗ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿದರೆ, ವಾಹನಗಳು ಬಂದು ಹೋಗುವುದಕ್ಕೆ ರಸ್ತೆ ಇರುವುದಿಲ್ಲ. ರೋಟರಿ ಸಂಸ್ಥೆಯಿಂದ ಮಕ್ಕಳಿಗೆ ನಾವು ಉಚಿತವಾಗಿ ಸಮವಸ್ತ್ರ ನೀಡುತ್ತಿದ್ದೇವೆ. ಕಲಿಕಕೋಪಕರಣಗಳನ್ನು ರೋಟರಿ ಸಂಸ್ಥೆಯಿಂದಲೇ ನೀಡುತ್ತಿದ್ದೇವೆ. ನಮ್ಮ ಶಾಲೆ ಮಾತ್ರವಲ್ಲದೆ ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವಾರು ಸರ್ಕಾರಿ ಶಾಲೆಗಳಿಗೂ ಉಚಿತವಾಗಿ ಪುಸ್ತಕಗಳು ನೀಡುವುದರೊಂದಿಗೆ ಸರಕಾರಿ ಶಾಲೆಗಳಲ್ಲಿ ಹೈಟೆಕ್ ಶೌಚಾಲಯಗಳ ನಿರ್ಮಾಣ ಮಾಡಿಕೊಟ್ಟಿದ್ದೇವೆ. ಕಳೆದ ೫೦ ವರ್ಷಗಳಿಂದ ನೂರಾರು ಸೇವಾ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಸಾರ್ವಜನಿಕರ ಸಂಸ್ಥೆಯಾದ ನಮಗೆ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿದರು.
