
ಉದಯವಾಹಿನಿ, ಹೊಸಕೋಟೆ: ದೊಡ್ಡಹುಲ್ಲೂರಿನಲ್ಲಿ ಶಿಥಿಲಾವ್ಯವಸ್ಥೆ ತಲುಪಿದ್ದ ಹೊಯ್ಸಳರ ಕಾಲದಲ್ಲಿ ಸೋಮೇಶ್ವರ ದೇವಾಲಯ ಉಳಿಸಲು ಟೊಂಕ ಕಟ್ಟಿರುವ ಗ್ರಾಮಸ್ಥರು ದೇವಾಲಯದ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ.
ತಾಲ್ಲೂಕಿನ ಹೋಬಳಿಯ ದೊಡ್ಡಹುಲ್ಲೂರು ಗ್ರಾಮದಲ್ಲಿ ಸುಮಾರು 800 ವರ್ಷಗಳ ಹಳೆಯದಾದ ಸೋಮೇಶ್ವರ ದೇವಾಲಯ ಪಾಳುಬಿದ್ದಿತು.
ಪ್ರಾಚೀನ ದೇಗುಲ ರಕ್ಷಣೆಗೆ ಗ್ರಾಮಸ್ಥರೆಲ್ಲರು ಒಂದುಗೂಡಿ ಯೋಜನೆ ರೂಪಿಸಿದ್ದು, ಕಾಮಗಾರಿ ಆರಂಭಿಸಿದ್ದಾರೆ. ಮುಚ್ಚಿಹೋಗಿದ್ದ ದೇವಾಲಯದ ದಾರಿಗೆ ಮರುಜೀವ ನೀಡಿದ್ದಾರೆ.
ಗ್ರಾಮಸ್ಥರ ಅವಜ್ಞೆಯಿಂದ ಶಿಥಿಲಾವಸ್ಥೆಗೆ ತಲುಪಿ, ಪಾಳುಬಿದಿತ್ತು. ದೇವಾಲಯದ ಸುತ್ತಲು ಗಿಡಗಂಟೆ, ಮುಳ್ಳಿನ ಪೊದೆಗಳು ಬೆಳೆದು ಗ್ರಾಮಸ್ಥರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿತ್ತು. ಇದೀಗ ದೇಗುಲ ಆವರಣ ಸ್ವಚ್ಛಗೊಳಿಸಲಾಗಿದೆ.
ದೇವಾಲಯವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಶಿಲ್ಪಿಗಳು ಮತ್ತು ತಜ್ಞರನ್ನು ಕರೆಸಿ ಈಗಾಗಲೆ ಚರ್ಚಿಸಿದ್ದೇವೆ. ಪ್ರಸ್ತುತ ಇರುವ ದೇವಾಲಯವನ್ನು ಉಳಿಸಿ ಅದರ ಮೇಲೆ ಮತ್ತೊಂದು ದೇವಾಲಯ ನಿರ್ಮಿಸುವುದೋ ಅಥವಾ ಶಿಥಿಲಾವಸ್ಥೆಯಲ್ಲಿರುವ ದೇವಾಲಯವನ್ನು ಮತ್ತೆ ಜೋಡಿಸುವುದೋ ಎಂಬುದರ ಬಗ್ಗೆ ಗ್ರಾಮಸ್ಥರು ಮತ್ತು ಇತಿಹಾಸ ತಜ್ಞರೊಡನೆ ಚರ್ಚೆ ನಡೆಯುತ್ತಿದೆ. ಎಲ್ಲರ ಅಭಿಪ್ರಾಯದಂತೆ ದೇವಾಲಯದ ಅಭಿವೃದ್ಧಿ ಕಾರ್ಯ ಶುರು ಮಾಡುತ್ತೇವೆ. ಆ ನಂತರ ಇದೊಂದು ಪ್ರವಾಸಿ ತಾಣ ಮಾಡುವ ಯೋಜನೆಯೂ ಇದೆ’ ಎಂದು ಗ್ರಾಮದ ಮುಖಂಡ ರಾಜಗೋಪಾಲ್ ತಿಳಿಸಿದರು.
