ಉದಯವಾಹಿನಿ, ಆನೇಕಲ್: ಮೂರು ಕಾಡಾನೆಗಳ ಹಿಂಡು ಸೋಮವಾರ ಬೆಳಗಿನ ಜಾವ ಆನೇಕಲ್ ತಾಲ್ಲೂಕಿನ ಚಿಕ್ಕಹಾಗಡೆ, ಸಿಡಿಹೊಸಕೋಟೆಯ ವಿವಿಧ ತೋಟಗಳಿಗೆ ನುಗ್ಗಿ ಬೆಳೆಯನ್ನು ತಿಂದು ಹಾಳುಮಾಡಿವೆ.
ಚಿಕ್ಕಹಾಗಡೆಯ ರಾಜಪ್ಪ ಅವರಿಗೆ ಸೇರಿದ ಒಂದು ಎಕರೆ ಟೊಮೊಟೊ ತೋಟದಲ್ಲಿನ ಬೆಳೆಯನ್ನು ಕಾಡಾನೆಗಳು ತಿಂದು, ತುಳಿದು ಹಾಕಿವೆ. ಕೊಯ್ಲಿಗೆ ಬಂದಿದ್ದ ಲಕ್ಷಾಂತರ ಬೆಳೆ ಹಾಳಾಗಿದೆ. ಕಾಡಾನೆಗಳು ರಾಗಿಯ ಮೆದೆಗಳನ್ನು ತಿಂದು ಹಾಕಿವೆ ಮತ್ತು ಬಾಳೆ ತೋಟಕ್ಕೆ ನುಗ್ಗಿ ತುಳಿದು ಹಾಕಿವೆ. ವರ್ಷವಿಡೀ ಕಷ್ಟಪಟ್ಟು ಬೆಳೆದಿದ್ದ ಬೆಳೆ ಒಂದೇ ದಿನದಲ್ಲಿ ಹಾಳಾಗಿದೆ. ಇದರಿಂದಾಗಿ ರೈತರು ಪರದಾಡುವಂತಾಗಿದೆ.
ತಮಿಳುನಾಡಿನ ಕಡೆಯಿಂದ ಬಂದ ಕಾಡಾನೆಗಳು ಮುತ್ಯಾಲಮಡುವುದು ಮೂಲಕ ಆನೇಕಲ್ ದೊಡ್ಡಕೆರೆಯ ಮಾರ್ಗವಾಗಿ ಸಿಡಿಹೊಸಕೋಟೆ, ಚಿಕ್ಕಹಾಗಡೆ ಗ್ರಾಮಗಳ ವಿವಿಧ ರೈತರ ಬೆಳೆಗಳನ್ನು ಹಾಳು ಮಾಡಿವೆ. ಅರಣ್ಯ ಇಲಾಖೆಗೆ ಮಾಹಿತಿ ಬರುತ್ತಿದ್ದಂತೆ ಸಿಬ್ಬಂದಿ ಪಟಾಕಿಗಳನ್ನು ಸಿಡಿಸಿ ಆನೆಗಳನ್ನು ಕಾಡಿನತ್ತ ಓಡಿಸಿದ್ದಾರೆ.
ಕೆಲ ದಿನಗಳಿಂದ ವಣಕನಹಳ್ಳಿ, ಮೆಣಸಿಗಹಳ್ಳಿ, ಸುಣವಾರ, ಪಟ್ಟಣಗೆರೆ ಗೊಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಆನೆಗಳು ದಾಳಿ ನಡೆಸಿ ಬೆಳೆಗಳನ್ನು ಹಾಳುಮಾಡುತ್ತಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಮಾಡಿದರು ಕಣ್ತಪ್ಪಿಸಿ ಆನೆಗಳು ಕಾಡಿನಿಂದ ಗ್ರಾಮಗಳತ್ತ ನುಗ್ಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
