ಉದಯವಾಹಿನಿ, ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ದಕ್ಷಿಣ ಭಾರತದಲ್ಲಿ ಅಚ್ಚರಿ ಫಲಿತಾಂಶ ಬರಲಿದ್ದು, ಕರ್ನಾಟದಲ್ಲೇ ಬಿಜೆಪಿ- ಜೆಡಿಎಸ್ ಮೈತ್ರಿಕೂಟ 25ಕ್ಕೂ ಸ್ಥಾನಗಳನ್ನು ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭವಿಷ್ಯ ನುಡಿದಿದ್ದಾರೆ.ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಇಡೀ ದೇಶ ಭರವಸೆಯಿಂದ ಮೋದಿ ಅವರ ನಾಯಕತ್ವದತ್ತ ನೋಡುತ್ತಿದೆ. ಇಡೀ ದೇಶದಲ್ಲಿ ಮೋದಿ ಅವರ ಅಲೆ ಇದೆ. ಈ ಬಾರಿ ದಕ್ಷಿಣ ಭಾರತದಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಕಡೆ ಗೆದ್ದೇ ಗೆಲ್ಲುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯ ಇವತ್ತು ಕಾಂಗ್ರೆಸ್ ಬಗ್ಗೆ ಭ್ರಮನಿರಸನವಾಗಿದೆ. ಮಾತೆತ್ತಿದರೆ ನಾವು ದಲಿತರ ರಕ್ಷಕರು ಎನ್ನುತ್ತಾರೆ. ಆದರೆ, ರಕ್ಷಣೆ ಎಲ್ಲಿದೆ ಎಂದು ಪ್ರಶ್ನೆ ಮಾಡಿದರು.ಕಾಂಗ್ರೆಸ್ ಪಕ್ಷದವರು ಎಸ್ಸಿ-ಎಸ್ಟಿ ಸಮುದಾಯದ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಲಿಲ್ಲ. ನಾವು ಮೀಸಲಾತಿ ಹೆಚ್ಚು ಮಾಡುವಾಗ ನಮ್ಮ ಮೇಲೆ ಕೂಗಾಡಿದ್ರು, ಇದೊಂದು ಸ್ಟಂಟ್ ಅಂದರು. ಈ ಬಾರಿ 10 ಸಾವಿರ ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಕೋಟಾದಲ್ಲಿ ಸೇರಿದ್ದಾರೆ. ಇದಕ್ಕೆ ಕಾರಣ ನಮ್ಮ ಮೀಸಲಾತಿ ಹೆಚ್ಚಳ ಎಂದು ಅಭಿಪ್ರಾಯಪಟ್ಟರು.
ನಾವು ರಾಜ್ಯಪಾಲರ ಒಪ್ಪಿಗೆ ಪಡೆದು ಗೆಜೆಟ್ ನೋಟಿಫಿಕೇಶನ್ ಮಾಡಿದ್ದೀವೆ. ಎಸ್ಸಿ-ಎಸ್ಟಿ ಹಣವನ್ನು ಗ್ಯಾರಂಟಿಗೆ ಹಾಕೊಂಡ್ರು, ಇದು ದಲಿತರ ಅಭಿವೃದ್ಧಿನಾ ಎಂದು ತರಾಟೆಗೆ ತೆಗೆದುಕೊಂಡರು. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಆಶೋಕ್ ಮಾತನಾಡಿ, ರುದ್ರಯ್ಯ ಅವರು ದಕ್ಷ ಅಧಿಕಾರಿಯಾಗಿ, ನೈಪುಣ್ಯತೆ ಹೊಂದಿದ್ದಾರೆ. ಅವರನ್ನು ದೊಡ್ಡ ಸಮುದಾಯ ಪ್ರೀತಿ ಮಾಡುತ್ತೆ, ಜನ ಬೆಂಬಲ ಇದೆ. ಕಳೆದ ಬಾರಿ ಅವರು ಲಿಂಗಸಗೂರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋತರು. ಬಿಜೆಪಿಯೂ ಅವರ ಅನುಭವವನ್ನು ಬಳಸಿಕೊಳ್ಳಲಿದೆ ಎಂದರು.
