ಉದಯವಾಹಿನಿ, ಬಳ್ಳಾರಿ : ಕಾರ್ಮಿಕ ಇಲಾಖೆ ವತಿಯಿಂದ ಸಿರುಗುಪ್ಪ ನಗರದಲ್ಲಿ ವಿವಿಧೆಡೆ ದಾಳಿ ನಡೆಸಿ 04 ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ರಕ್ಷಣೆ ಮಾಡಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ ಅವರು ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣ ಘಟಕ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಚೈಲ್ಡ್‍ಲೈನ್ ಸಹಯೋಗದೊಂದಿಗೆ ಸಿರುಗುಪ್ಪ ತಾಲ್ಲೂಕು ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರಡಿ ನೇಮಕವಾದ ನಿರೀಕ್ಷಕರ ಟಾಸ್ಕ್ ಪೋರ್ಸ್ ಸಮಿತಿ ಸಭೆಯನ್ನು ನಡೆಸಲಾಗಿದೆ.
ಅದರಂತೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸಿರುಗುಪ್ಪ ನಗರದಲ್ಲಿ ಸಿಂಧನೂರು ರಸ್ತೆ, ದೇಶನೂರು, ಇಬ್ರಾಹಿಂಪುರ, ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿರುವ ಮಂತಾದ ಸ್ಥಳಗಳಲ್ಲಿರುವ ಗ್ಯಾರೇಜ್, ಬೇಕರಿ, ಹೋಟೆಲ್, ಮೆಕ್ಯಾನಿಕ್ ಶಾಪ್, ಕಿರಾಣಿ ಅಂಗಡಿ, ಇಟ್ಟಂಗಿ ಭಟ್ಟಿ, ಗುಜರಿ ಶಾಪ್ ಇತ್ಯಾದಿ ಉದ್ದಿಮೆಗಳ ಮೇಲೆ ಆಕಸ್ಮಿಕ ದಾಳಿ ಮಾಡಿ 04 ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ ಮಕ್ಕಳನ್ನು ಮುಖ್ಯವಾಹಿನಿ ಶಾಲೆಗಳಿಗೆ ಮರು ದಾಖಲಿಸಲಾಯಿತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ತಹಶೀಲ್ದಾರ ಹೆಚ್.ವಿಶ್ವನಾಥ್, ಕಾರ್ಮಿಕ ನಿರೀಕ್ಷಕ ಮಂಜುನಾಥ, ಆರೋಗ್ಯ ನಿರೀಕ್ಷಕ ಜೆ. ಗೋವಿಂದಪ್ಪ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಮಲ್ಲೇಶಪ್ಪ, ಕಂದಾಯ ನಿರೀಕ್ಷಕ ಬಸವರಾಜ್.ಎ., ಚೈಲ್ಡ್ ಲೈನ್ ಸಿಬ್ಬಂದಿ ಅರುಣ್ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!