ಉದಯವಾಹಿನಿ, ಸಂಡೂರು: ಪ್ರತಿಯೊಬ್ಬ ಹೆಣ್ಣು ಮಗುವೂ ಸಹ ಉತ್ತಮ ಶಿಕ್ಷಣ ಪಡೆಯಬೇಕು, ಕಾರಣ ಸರ್ಕಾರ ಮಹಿಳೆಯರ ಪ್ರಗತಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಪೂರ್ಣ ಸದುಪಯೋಗ ಪಡೆದುಕೊಳ್ಳುವ ಮೂಲಕ ಆರ್ಥಿಕ, ಸಾಮಾಜಿಕ ಶೈಕ್ಷಣಿಕ ಪ್ರಗತಿಯನ್ನು ಸಾಧಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀದೇವಿ ಕರೆನೀಡಿದರು.
ಅವರು ತಾಲೂಕಿನ ತಾಳೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಳೂರು ಸರ್ಕಾರಿ ಪ್ರೌಢಶಾಲೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ “ಬೇಟಿ ಬಚಾವೋ ಬೇಟಿ ಪಡಾವೋ” ಮತ್ತು ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಹಾಗೂ ಮುಟ್ಟಿನ ನೈರ್ಮಲ್ಯ ಕುರಿತು ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸೈಕಲ್ ಜಾಥ ಕ್ಕೆ ಚಾಲನೆ ನೀಡಿ ಮಾತನಾಡಿ ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗುವುದು ಎನ್ನುವ ಮಾತಿನಂತೆ ನಾವು ಕುಟುಂಬ ನಿರ್ವಹಣೆಗೂ ಸೈ, ಆಡಳಿತ ನಡೆಸಲು ಸೈ, ಅಂತಹ ಹೆಣ್ಣು ಮಗು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು ಅಗ ಮಾತ್ರ ಪ್ರಗತಿಯನ್ನು ಸಾಧಿಸಲು ಸಾಧ್ಯ, ಅಲ್ಲದೆ ಪ್ರತಿಯೊಬ್ಬರೂ ಸಹ ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ತಿಳಿದು ಕಾರ್ಯನಿರ್ವಹಿಸಿದಾಗ ಪ್ರಗತಿಯ ಜೊತೆಗೆ ದೇಶದ ಸಾಧನೆಯನ್ನು ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಾಬುನ್ನಿ ಮತ್ತು ಆಶಾಭಿ ಅವರು ಉಪಸ್ಥಿತರಿದ್ದರು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಕಾರಣ ಹೆಣ್ಣು ಮಕ್ಕಳು ಅಡುಗೆ ಮನೆಗೆ ಸೀಮಿತವಾಗುತ್ತಾರೆ ಅದರಿಂದ ಹೊರಬರಬೇಕಾದರೆ ಶಿಕ್ಷಣ ಮತ್ತು ಜಾಗೃತಿ ಮುಖ್ಯ ಎಂದರು.
