ಉದಯವಾಹಿನಿ,ಹಾಸನ: ಎಚ್.ಡಿ. ದೇವೇಗೌಡರೇ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಚರ್ಚೆಗಳು ಕ್ಷೇತ್ರದಾದ್ಯಂತ ನಡೆಯುತ್ತಿವೆ. ನನಗೆ 91 ವರ್ಷ ವಯಸ್ಸಾಗಿದೆ. ನಾನು ನಿಲ್ಲುವುದಿಲ್ಲ. ಅದಕ್ಕಾಗಿ ಹಾಲಿ ಸಂಸದ ಪ್ರಜ್ವಲ್ ಅವರನ್ನು ಕಣಕ್ಕೆ ಇಳಿಸಲು ನಾನೇ ನಿರ್ಣಯ ಮಾಡಿದ್ದೇನೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊನೆಯ ಚುನಾವಣೆ ನಾನು ನಿಲ್ಲುತ್ತೇನೆ ಎನ್ನುವ ಭಾವನೆ ಮೂಡಿಸಲು ಕೆಲವರು ಪ್ರಯತ್ನ ಮಾಡಿದ್ದರು. ಪ್ರಜ್ವಲ್ ರೇವಣ್ಣ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿ, ಮತವನ್ನು ನೀಡಲು ನಾನಾಗಿಯೇ ಹೋಗಿ ಜನಗಳ ಮುಂದೆ ಕೈ ಚಾಚಿ ಕೇಳುತ್ತೇನೆ ಎಂದು ಹೇಳಿದರು.
ಎನ್‌ಡಿಎ ಮೈತ್ರಿ ಆದ ನಂತರ ಯಾರಿಗೆ ಎಷ್ಟು ಸೀಟು ಎಂಬುದು ನಿರ್ಣಯ ಆಗಿಲ್ಲ. ಪ್ರಜ್ವಲ್ ಹಾಸನ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಗೊಂದಲಗಳು ಇರಬಾರದು. ಮುಂದಿನ ತಿಂಗಳು ಮತ್ತೆ ಪ್ರವಾಸ ಮಾಡುತ್ತೇನೆ. ನಂತರ ಹೋಬಳಿಗಳಿಗೆ ಹೋಗಿ ಪ್ರಜ್ವಲ್ ರೇವಣ್ಣ ಗೆಲುವಿಗೆ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ನಮ್ಮ ಮನೆಗೆ ಬಂದಾಗ ಪ್ರಜ್ವಲ್ ರೇವಣ್ಣ ಸ್ವಾಗತ ಮಾಡಿದ್ದಾರೆ. ಯಡಿಯೂರಪ್ಪ ಅವರ ಜೊತೆಯೂ ಮಾತನಾಡಿದ್ದೇನೆ. ಒಂದುಗೂಡಿ ಕೆಲಸ ಮಾಡುವ ಬಗ್ಗೆ ಸೂಕ್ಷ್ಮವಾಗಿ ನಿಮ್ಮ ಗಮನಕ್ಕೆ ತಂದಿದ್ದೇನೆ. ಸೀಟು ಎಲ್ಲೆಲ್ಲಿ ಯಾರ‍್ಯಾರಿಗೆ ಎನ್ನುವುದು ಇನ್ನೂ ತೀರ್ಮಾನ ಆಗಿಲ್ಲ ಎಂದರು.
