ಉದಯವಾಹಿನಿ, ವಿಜಯಪುರ(ದೇವನಹಳ್ಳಿ): ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಾಲ್ಕು ವರ್ಷಗಳಿಂದ ದೈಹಿಕ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ಕ್ರೀಡಾಚಟುವಟಿಕೆಗಳಿಗೆ ಹಿನ್ನಡೆಯ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವ ಕನಸಿಗೆ ಅಡ್ಡಿಯಾಗಿದೆ.ಶಾಲೆಯಲ್ಲಿದ್ದ ಇಬ್ಬರು ದೈಹಿಕ ಶಿಕ್ಷಕರು ಕಡ್ಡಾಯ ವರ್ಗಾವಣೆಯಲ್ಲಿ, ವರ್ಗಾವಣೆಯಾಗಿ ನಾಲ್ಕು ವರ್ಷ ಕಳೆದಿವೆ. ಇದುವರೆಗೂ ಇಲಾಖೆಯಿಂದ ಒಬ್ಬ ದೈಹಿಕ ಶಿಕ್ಷಕರನ್ನೂ ನೇಮಕ ಮಾಡಿಲ್ಲ. 334 ಮಂದಿ ವಿದ್ಯಾರ್ಥಿಗಳಿದ್ದರೂ ಅವರೆಲ್ಲರಿಗೂ ಬೆಳಗಿನ ಪ್ರಾರ್ಥನೆ, ಯೋಗ, ಧ್ಯಾನ, ಕ್ರೀಡಾಚುಟುವಟಿಕೆ ಇತರೆ ಶಿಕ್ಷಕರ ನೆರವಿನಿಂದ ನಡೆಯುತ್ತಿದೆ. ಈ ಕೊರತೆಯ ನಡುವೆ ಶಾಲೆಯ ಗಣಿತ ಶಿಕ್ಷಕರೊಬ್ಬರ ಮಾರ್ಗದರ್ಶನದಲ್ಲಿ ಕ್ಲಸ್ಟರ್ ಹಂತ, ಹೋಬಳಿ ಹಂತ, ವಿಭಾಗದ ಹಂತದವರೆಗೂ ಕ್ರೀಡೆಗಳಲ್ಲಿ ಸಾಧನೆ ಮಾಡಿದ್ದಾರೆ.
ಇಲಾಖೆಯಿಂದ ಆಯೋಜನೆಗೊಳ್ಳುವ ಕ್ರೀಡಾಕೂಟಗಳಿಗೆ ವಿದ್ಯಾರ್ಥಿಗಳೇ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಕ್ರೀಡಾ ಸಾಮಾಗ್ರಿಗಳಿದ್ದರೂ ಅವುಗಳ ಸದ್ಭಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ.ಶಾಲೆಯಲ್ಲಿ ಒಟ್ಟು 18 ಮಂದಿ ಶಿಕ್ಷಕರ ಹುದ್ದೆಗಳಿದ್ದು, ಅವರ ಪೈಕಿ ಒಂಭತ್ತು ಮಂದಿ ಶಿಕ್ಷಕರು ಮಾತ್ರವಿದ್ದಾರೆ. ಏಳು ಅತಿಥಿ ಶಿಕ್ಷಕರಿಂದಾಗಿ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗದಂತೆ ಕಾಪಾಡಿಕೊಂಡು ಬರಲಾಗುತ್ತಿದೆ. ಜ.31 ಕ್ಕೆ ಮತ್ತೊಬ್ಬ ಶಿಕ್ಷಕಿ ನಿವೃತ್ತಿಯಾಗಲಿದ್ದು, ಕಾಯಂ ಶಿಕ್ಷಕರ ಸಂಖ್ಯೆ 8ಕ್ಕೆ ಇಳಿಕೆಯಾಗಲಿದೆ.ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ 54 ಮಂದಿ, 9ನೇ ತರಗತಿಯಲ್ಲಿ 135 ಮಂದಿ, 10ನೇ ತರಗತಿಯಲ್ಲಿ 145 ಮಂದಿ, ಒಟ್ಟು 334 ಮಂದಿ ವಿದ್ಯಾರ್ಥಿಗಳಿದ್ದಾರೆ. ಪ್ರಸ್ತುತ ಆಂಗ್ಲಭಾಷೆ ಶಿಕ್ಷಕರು-2, ಸಮಾಜ ವಿಜ್ಞಾನ-2, ಹಿಂದಿ-2, ದೈಹಿಕ ಶಿಕ್ಷಕರು-2, ವಿಜ್ಞಾನ(ಸಿ.ಬಿ.ಜೆಡ್)-1, ಹಾಗೂ ಡಿ.ದರ್ಜೆ ನೌಕರರ ಹುದ್ದೆ ಖಾಲಿಯಿದೆ.

 

Leave a Reply

Your email address will not be published. Required fields are marked *

error: Content is protected !!