ಉದಯವಾಹಿನಿ, ದೇವನಹಳ್ಳಿ: ಬರಗಾಲ ಘೋಷಿತ ಜಿಲ್ಲೆಯಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬರ ನಿವಾರಣೆಗೆ ಕೈಗೊಂಡ 453 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಚ್‌. ಮುನಿಯಪ್ಪ ತಿಳಿಸಿದರು.
ಜಿಲ್ಲಾಡಳಿತದಿಂದ ದೇವನಹಳ್ಳಿ ಟೌನ್‌ನ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.ಗೋಕಟ್ಟೆ, ಕುಂಟೆ, ಕೆರೆ, ಕಲ್ಯಾಣ , ಕೃಷಿ ಹೊಂಡ, ಬದು ನಿರ್ಮಾಣ, ನಾಲಾ ಅಭಿವೃದ್ದಿ, ಚೆಕ್ ಡ್ಯಾಂ ಮತ್ತು ಸಸಿ ನೆಡುವಂತಹ ಒಟ್ಟು 3,284 ಕಾಮಗಾರಿ ಕೈಗೆತ್ತಿಕೊಂಡಿದ್ದು, ಈವರೆಗೆ 453 ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.ರಾಗಿ ಖರೀದಿ: 2022-23ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ 29, 492 ರೈತರಿಂದ ಕ್ವಿಂಟಾಲ್ ರಾಗಿಗೆ ₹3,846 ರಾಗಿ ಖರೀದಿಸಲು ಕ್ರಮವಹಿಸಲಾಗಿದೆ. ಈವರೆಗೆ 26,660 ರೈತರು 2,59,360 ಕ್ವಿಂಟಾಲ್ ರಾಗಿ ಖರೀದಿಗೆ ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ 1.28ಕೋಟಿ ಪಡಿತರ ಚೀಟಿಯಲ್ಲಿನ ಅರ್ಹ ಕುಟುಂಬಗಳಿಗೆ ಪ್ರತಿ ತಿಂಗಳು ಸುಮಾರು 4 ಕೋಟಿ ಫಲಾನುಭವಿಗಳಿಗೆ ಜುಲೈನಿಂದ ಡಿಸೆಂಬರ್‌ವರೆಗೆ 3,751 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಜನತಾ ದರ್ಶನಕ್ಕೆ ಉತ್ತಮ ಸ್ಪಂದನೆ: ಜಿಲ್ಲೆಯಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಈಗಾಗಲೇ ದೇವನಹಳ್ಳಿಯಲ್ಲಿ ಸಾರ್ವಜನಿಕ ಸಂಪರ್ಕ ಸಭೆ ಏರ್ಪಡಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ದೊಡ್ಡಬಳ್ಳಾಪುರ ಹಾಗೂ ಘಾಟಿ ಸುಬ್ರಹ್ಮಣ್ಯದಲ್ಲಿ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆಗಳ ಶೀಘ್ರ ಇತ್ಯರ್ಥಪಡಿಸಲು ಕ್ರಮವಹಿಸಲಾಗಿದೆ. ಜನತಾ ದರ್ಶನಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಮಹಿಳಾ ಸಬಲೀಕರಣಕ್ಕೆ ಆದ್ಯತೆ: ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶದಿಂದ ಪ್ರತಿ ದಿನ ಸರಾಸರಿ 50 ರಿಂದ 60 ಲಕ್ಷ ಪ್ರಯಾಣಕರಿಗೆ ಅನುಕೂಲವಾಗುತ್ತಿದೆ. ಈ ಯೋಜನೆಗೆ ವಾರ್ಷಿಕ ₹4,000 ಕೋಟಿ ವೆಚ್ಚ ಮಾಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ. ಈ ಯೋಜನೆಯು ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆಯಾಗಿದೆ.

Leave a Reply

Your email address will not be published. Required fields are marked *

error: Content is protected !!